ಔರಾದ್: ಪಟ್ಟಣದಲ್ಲಿ 20ರಂದು ಕರೆ ನೀಡಿರುವ ಬಂದ್ ಹಿಂಪಡೆಯಬೇಕು. ಇಬ್ಬರ ಮೇಲಿರುವ ಜಾತಿ ನಿಂದನೆ ಪ್ರಕರಣ ಸಮಗ್ರ ತನಿಖೆ ನಡೆಸಿ, ಆರೋಪ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಭಾಲ್ಕಿ ವಿಭಾಗದ ಎಎಸ್ಪಿ ಪೃತ್ವಿಕ್ ಶಂಕರ ಭರವಸೆ ನೀಡಿದರು.
ಪತ್ರಕರ್ತ ಅಮರ ಸ್ವಾಮಿ ಮತ್ತು ಕನ್ನಡಪರ ಹೋರಾಟಗಾರ ರಾಜಕುಮಾರ ಎಡವೆ ಮೇಲೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಲ್ಲ ಮುಖಂಡರ ಹಾಗೂ ಮಾರ್ಕೆಟ್ ಯೂನಿಯನ್ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದರು.
ಜಾತಿ ನಿಂದನೆ ಪ್ರಕರಣದ ತನಿಖಾಕಾರಿ ನಾನೆ ಆಗಿದ್ದು, ತಪ್ಪು ಮಾಡದಿರುವವರ ಹೆಸರನ್ನು ಕೈಬಿಡುತ್ತೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನೀಲ್ ಬೇಲೂರೆ ಮಾತನಾಡಿ, ಪತ್ರಕರ್ತ ಅಮರ ಸ್ವಾಮಿ ಬಸವಕಲ್ಯಾಣದಲ್ಲಿ ಮತ್ತು ಕನ್ನಡಪರ ಹೋರಾಟಗಾರ ರಾಜಕುಮಾರ ಎಡವೆ ಗ್ರಾಮದಲ್ಲಿ ಇಲ್ಲದಿರುವಾಗ ಪ್ರಕರಣ ದಾಖಲಿಸಲಾಗಿದೆ. ಇದು ಅತ್ಯಂತ ಖಂಡನೀಯ. ಹೋರಾಟಕ್ಕೆ ವಿವಿಧ ಸಂಘಟನೆ ಮುಖಂಡರು, ಮಾರ್ಕೆಟ್ ಯೂನಿಯನ್, ಕಾರ್ಯನಿರತ ಪತ್ರಕರ್ತರ ಸಂಘದವರು ಬೆಂಬಲಿಸಿದ್ದಾರೆ. ಕೂಡಲೇ ಇಬ್ಬರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು. ಇಲ್ಲದಿದ್ದರೆ 20ರಂದು ಅಘೋಷಿತ ಬಂದ್ ಗೆ ಕರೆ ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ವ್ಯಾಪಾರಿ ಪ್ರಕಾಶ ಘೂಳೆ ಮಾತನಾಡಿ, ಯಾರೋ ಅಪರಿಚಿತರು ಅಂಗಡಿಗೆ ನುಗ್ಗಿದರೂ ಸುಮ್ಮನೆ ಕುಳಿತಿದ್ದೇವೆ. ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನೀವು ಯಾರೆಂದು ಪ್ರಶ್ನಿಸಿದರೆ ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿ, ಕೇಂದ್ರ ಸ್ಥಾನದಲ್ಲಿರದ ವ್ಯಕ್ತಿಗಳ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಇದು ಸರಿಯಲ್ಲ ಎಂದರು.
ಹೋರಾಟಗಾರ ಬಸವರಾಜ ಶೇಟಕಾರ ಮಾತನಾಡಿ, ವಾರದಲ್ಲಿ ಪ್ರಕರಣ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸಿಪಿಐ ಮಲ್ಲಿಕಾರ್ಜುನ ಇಕ್ಕಳಗಿ, ಪಿಎಸ್ಐ ಮಡಿವಾಳಪ್ಪ ಬಾಗೋಡಿ, ಶರಣಪ್ಪ ಪಂಚಾಕ್ಷರಿ, ಅಮರ ಎಡವೆ, ರವೀಂದ್ರ ಮೀಸೆ, ಅನೀಲ ದೇವಕತ್ತೆ, ಸ್ವಾಮಿದಾಸ ಮುಧಾಳೆ ಇತರರಿದ್ದರು.