ಜಿಲ್ಲೆ

ತನಿಖಾಧಿಕಾರಿ, ಪೊಲೀಸರ ಬದಲಿಸಿ: ದಲಿತ ಯುವಕರ ಕೊಲೆ ಪ್ರಕರಣ

ತುಮಕೂರು: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಹಿತರಕ್ಷಣೆಗೆ ಸಂಬಂಧಿಸಿದ ಅಹವಾಲು ಆಯಾ ತಾಲೂಕು, ನಂತರ ಉಪವಿಭಾಗ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಿದ ನಂತರವಷ್ಟೇ ಜಿಲ್ಲಾ ಮಟ್ಟದ ಹಿತರಕ್ಷಣಾ ಸಮಿತಿಗೆ ಬರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಸೂಚಿಸಿದರು.

ನಗರದ ಬಾಲಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ.ಜಾತಿ, ಪ.ಪಂಗಡದ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಮಾತನಾಡಿದ ಅವರು, ತಹಸೀಲ್ದಾರ್​, ಉಪವಿಭಾಗಾಧಿಕಾರಿ ಮತ್ತು ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೆದ್ದನಹಳ್ಳಿ, ಮಂಚಲದೊರೆ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿ ಮತ್ತು ತಳಮಟ್ಟದ ಪೊಲೀಸರನ್ನು ಬದಲಾಯಿಸಬೇಕು. ಕೊಲೆಯಾದವರ ಕುಟುಂಬದವರಿಗೆ ತಲಾ 25ಲಕ್ಷ ರೂ. ಪರಿಹಾರ ನೀಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಸತ್ತಿರುವ ಯುವಕರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರ ಆಗ್ರಹಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ನೊಂದ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗಿದೆ, 25ಲಕ್ಷ ರೂ. ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದರು.

ಮಾನಿಟರಿಂಗ್​ ಸೆಲ್​ನಲ್ಲಿ ಪರಿಶೀಲನೆ: ಪರಿಶಿಷ್ಟ ಸಮುದಾಯಕ್ಕೆ ಮಂಜೂರಾಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಪ್ಲಾಗಿಂಗ್​ ಮಾಡದೆ ರ್ನಿಲಕ್ಷ$್ಯ ತೋರಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೈ.ಎಸ್​. ಪಾಟೀಲ ಮಾತನಾಡಿ, ಬೆಂಗಳೂರಿನ ಭೂಮಿ ಮಾನಿಟರಿಂಗ್​ ಸೆಲ್​ನಲ್ಲಿ ಈ ಕುರಿತು ಪರಿಶೀಲಿಸಲಾಗುವುದು ಎಂದರು.

ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರಿ ಜಮೀನು ಲಭ್ಯವಿರುವ ಜಾಗದಲ್ಲಿ ಮಂಜೂರು ಮಾಡಲಾಗಿದೆ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಾಗ ಖರೀದಿಸಲು ಕ್ರಮವಹಿಸಲು ತಿಳಿಸಲಾಗಿದೆ ಎಂದರು.

ಜಿಲ್ಲೆಯ 8 ಗ್ರಾಮಗಳನ್ನು ಹೊರತುಪಡಿಸಿ ಉಳಿದ 2565 ಹಳ್ಳಿಗಳಲ್ಲಿ ಸ್ಮಶಾನ ಭೂಮಿಯನ್ನು ಮಂಜೂರು ಮಾಡಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ದಲಿತ ಮುಖಂಡರು ಇದ್ದರು.

ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊದಲಿಗೆ ಆಯಾ ಇಲಾಖಾ ಮುಖ್ಯಸ್ಥರು ತನಿಖೆ ನಡೆಸಿ ನಂತರ ಪೊಲೀಸ್​ ಠಾಣೆಗೆ ಸೆಕ್ಷನ್​ 4ರಡಿ ಪ್ರಕರಣ ದಾಖಲಿಸುವಂತೆ ವರದಿ ನೀಡಿದ ನಂತರ ಪ್ರಕರಣ ದಾಖಲು ಮಾಡಲಾಗುವುದು. > ರಾಹುಲ್​ಕುಮಾರ್​ ಶಹಪೂರ್​ವಾಡ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ