ಬಸವಕಲ್ಯಾಣ: ಬಾಣಂತಿ ಮತ್ತು ಮಗು ಸಾವು ಪ್ರಕರಣದ ತನಿಖಾಧಿಕಾರಿಗಳ ಸಮ್ಮುಖದಲ್ಲೇ ದೂರುದಾರನ ಮೇಲೆ ಖಾಸಗಿ ಆಸ್ಪತ್ರೆಯವರು ಹಲ್ಲೆ ಮಾಡಿದ ವಿಷಯ ತಿಳಿದು ದೌಡಾಯಿಸಿದ ಶಾಸಕ ಶರಣು ಸಲಗರ, ಆಸ್ಪತ್ರೆ ವೈದ್ಯರು ಮತ್ತು ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡರು.
ಹುಮನಾಬಾದ್ ತಾಲೂಕಿನ ಕನಕಟ್ಟಾದ ಕರುಣಾಬಾಯಿ ಶಿವಪುತ್ರ ಖೋಪಣ್ಣ ಚಿಕಿತ್ಸೆಗಾಗಿ ಮೇ ೩೦ರಂದು ನಗರದ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಹೆರಿಗೆ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ತಾಯಿ-ಮಗು ಕಲಬುರಗಿ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದರು. ಮಗುಸಹಿತ ಪತ್ನಿ ಕಳೆದುಕೊಂಡ ಪತಿ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಸೋಮವಾರ ಆರ್‌ಸಿಎಚ್ ಅಧಿಕಾರಿ ಡಾ.ಶಿವಶಂಕರ ಭತಮುರ್ಗೆ ಹಾಗೂ ಡಾ.ದಿಲೀಪ ಡೊಂಗ್ರೆ ನೇತೃತ್ವದ ತಂಡ ತನಿಖೆಗೆ ಆಗಮಿಸಿತ್ತು.
ಟಿಎಚ್‌ಒ ಕಚೇರಿಯಲ್ಲಿ ಅಧಿಕಾರಿಗಳ ಎದುರೇ ಆಸ್ಪತ್ರೆ ವೈದ್ಯ ಡಾ.ತಾಜೋದ್ದಿನ್ ಮತ್ತವರ ಸಹೋದರ ಡಾ.ಜಿಯಾವುದ್ದೀನ್ ದೂರುದಾರನ ಜತೆ ಕಿರಿಕಿರಿ ಮಾಡಿದ್ದಲ್ಲದೆ ಅವರ ಕಡೆಯವರು ಹಲ್ಲೆ ನಡೆಸಿದರು. ವಿಷಯ ತಿಳಿದ ಶಾಸಕ ಶರಣು ಸಲಗರ ಮೊಬೈಲ್‌ನಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ತಾಯಿ-ಮಗು ಸಾವಿನ ಬಗ್ಗೆ ತನಿಖೆ ನಡೆಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅಲ್ಲದೆ ಡಾ.ತಾಜೋದ್ದಿನ್ ಮತ್ತವರ ಸಹೋದರನನ್ನು ತರಾಟೆಗೆ ತಗೆದುಕೊಂಡರು. ಈ ವೇಳೆ ನೀವು ಓನ್ ಸೈಡ್ ಯೋಚನೆ ಮಾಡುತ್ತಿದ್ದೀರಿ. ನಮ್ಮ ಕೆಲಸದ ಬಗ್ಗೆ ಗಮನಿಸುತ್ತಿಲ್ಲ ಎಂದು ಶಾಸಕರ ವಿರುದ್ಧ ಡಾ.ತಾಜೋದ್ದಿನ್ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಅಂಬರೀಶ್ ವಾಗ್ಮೋಡೆ, ಕ್ರೈಂ ಪಿಎಸ್‌ಐ ಸುರೇಶ ಹಜ್ಜರಗಿ ಪರಿಸ್ಥಿತಿ ತಿಳಿಗೊಳಿಸಿದರು.