ಜಿಲ್ಲೆ

ತತ್ವಾಧಾರಿತ ಜೀವನದಿಂದ ಸಮಾಜ ಪರಿವರ್ತನೆ

ಮೈಸೂರು: ಎಲ್ಲರೂ ತತ್ವಾಧಾರಿತ ಜೀವನ ನಡೆಸಿದರೆ, ಸಮಾಜ ತಾನಾಗೇ ಪರಿವರ್ತನೆ ಆಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ, ಲೇಖಕಿ ಧರಣಿದೇವಿ ಮಾಲಗತ್ತಿ ಹೇಳಿದರು.


ಅಸ್ತಿತ್ವ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಡಿ.ಕೆ.ರಾಜೇಂದ್ರ ಅವರ ‘ನನ್ನ ಜೀವ ನನ್ನ ಭಾವ’ ಆತ್ಮಕಥೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ವರ್ಗಗಳಿದ್ದರೂ ಕಾರ್ಮಿಕ ವರ್ಗದಲ್ಲಿ ಸಾಕಷ್ಟು ಸಾಮಾಜಿಕ ಸಮಸ್ಯೆಗಳಿವೆ. ಅದರಂತೆ ಶ್ರಿಮಂತ ವರ್ಗದಲ್ಲಿ ಸಮಾಜದ ಬಗ್ಗೆ ಮುಕ್ತವಾದ ಚಿಂತನೆ ನಡೆಯಲ್ಲ. ಮೌಲ್ಯಯುತ ಬದುಕಿನಿಂದ ಬದಲಾವಣೆ ತರಬಹುದಾಗಿದೆ ಎಂದರು.


ಡಾ.ಡಿ.ಕೆ.ರಾಜೇಂದ್ರ ಅವರು ಯಾರಿಗೂ ನೋವಾಗದ ರೀತಿಯಲ್ಲಿ ಆತ್ಮಕಥೆಯನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ಕೆಲವು ಜೀವನ ಸೂತ್ರ ಪರಿಪೂರ್ಣವಾಗಿ ನಿರ್ವಹಣೆ ಮಾಡಿದ್ದಾರೆ. ಮಾತು ಉತ್ತಮವಾಗಿದ್ದರೆ ಸಮಾಜವೂ ಉತ್ತಮವಾಗಿ ಇರುತ್ತದೆ. ಇದನ್ನು ಕೃತಿಯಲ್ಲಿ ಸೂಕ್ಷ್ಮವಾಗಿ ದಾಖಲಿಸಿದ್ದಾರೆ ಎಂದರು.


ಮೈವಿವಿ ಕುವೆಂಪು ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಆತ್ಮಕಥೆಗಳು ಸಮಾಜದಲ್ಲಿರುವ ಹಸಿ ವಾಸ್ತವವನ್ನು ಬಿತ್ತರಿಸುಂತಹ ಒಂದು ಕೊಂಡಿಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ, ಇವುಗಳು ಸಮಾಜದ ದರ್ಶನ ಮತ್ತು ಗತಿಬಿಂಬ ಆಗಿರುತ್ತವೆ ಎಂದರು.


ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್, ವಿದ್ವಾಂಸ ಡಾ.ಸಿ.ಪಿ.ಕೃಷ್ಣಕುಮಾರ್, ಕೃತಿ ಲೇಖಕ ಡಾ.ಡಿ.ಕೆ.ರಾಜೇಂದ್ರ ಸೇರಿದಂತೆ ಇತರರಿದ್ದರು.