ಜಿಲ್ಲೆ

ತತ್ವ-ಸಿದ್ಧಾಂತ ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಿ

ಹರಪನಹಳ್ಳಿ: ತಾಯಿ ಜನ್ಮ ನೀಡಿದರೆ ಶಿಕ್ಷಕರು ಭವಿಷ್ಯ ರೂಪಿಸುತ್ತಾರೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪ ಮುಂಭಾಗದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಎಲ್ಲ ಶಿಕ್ಷಕರಿಗೆ ಮಾದರಿಯಾಗಿದ್ದು, ಅವರ ತತ್ವ-ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಬೇಕೆಂದರು.

ಎಸಿ ಚಿದಾನಂದ ಗುರುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ನಿರ್ದಿಷ್ಟವಾದ ಗುರಿ ಹೊಂದಬೇಕು. ಅದಕ್ಕೆ ಸಹಕಾರ ನೀಡಲು ಉತ್ತಮ ಗುರುವಿರಬೇಕು. ಆಗ ಯಶಸ್ಸು ಗಳಿಸಲು ಸಾಧ್ಯ. ಹರಗಿಂತ ಗುರು ದೊಡ್ಡವರು ಎಂಬುದನ್ನು ಭಾರತೀಯ ಪರಂಪರೆಯಿಂದ ಅರಿಯಬಹುದಾಗಿದೆ. ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು ಎಂದು ಸಲಹೆ ನೀಡಿದರು.

ತಾಪಂ ಇಒ ಚಂದ್ರಶೇಖರ್ ವೈ.ಎಚ್. ಮಾತನಾಡಿ, ಸತ್ತ ಮೇಲೂ ಹೆಸರು ಉಳಿಯುವಂತಹ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ನಾವು ಮಾಡುವ ವೃತ್ತಿಯ ಮೇಲೆ ನಮಗೆ ಶ್ರದ್ಧೆ ಇದ್ದಾಗ ಯಶಸ್ವಿ ಶಿಕ್ಷಕರಾಗಲು ಸಾಧ್ಯವೆಂದರು.

ಸೇವಾವಧಿಯಲ್ಲಿ ಮರಣ ಹೊಂದಿದ ಶಿಕ್ಷಕರ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಎಚ್.ಲೇಪಾಕ್ಷಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಮನೋಹರ್, ಕಾರ್ಯದರ್ಶಿ ಸೂರ್ಯನಾಯ್ಕ ಬಿ., ಪ್ರಮುಖರಾದ ಷರೀಫ್ ಎಂ., ಎನ್.ಟಿ.ಸೋಮಪ್ಪ, ಪಿ.ಬಸವರಾಜ್, ಲತಾ ಟಿಎಚ್‌ಎಂ, ಬಿ.ಗುರುಮೂರ್ತಿ, ಗುರುನಾಥ, ಸಂಗಯ್ಯ ಇತರರಿದ್ದರು.