ಜಿಲ್ಲೆ

ತತ್ವ-ಆದರ್ಶಗಳನ್ನು ಅನುಸರಿಸಿ

ಹಗರಿಬೊಮ್ಮನಹಳ್ಳಿ: ಭಗವಾನ್ ಮಹಾವೀರ ಅವರು ಶಾಂತ ಸ್ವರೂಪ ಮತ್ತು ಕರುಣಾಮಯಿಯಾಗಿದ್ದು, ತ್ಯಾಗಮಯ ಜೀವನ ನಡೆಸಿದರು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಜೈನ ಸಮುದಾಯದಿಂದ ನಡೆದ ಮಹಾವೀರರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ನಾವು ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಬೇಕು ಎಂದು ಬಡಿದಾಡುವುದು ಸರಿಯಲ್ಲ ಎನ್ನುವುದನ್ನು ಕಂಡುಕೊಂಡ ಮಹಾವೀರ, ಚಿಕ್ಕ ವಯಸ್ಸಿನಲ್ಲೇ ಎಲ್ಲ ತ್ಯಜಿಸಿ ಸನ್ಯಾಸ ಸ್ವೀಕರಿಸಿದರು. ಮಹಾವೀರರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು ಎಂದರು.

ಜೈನ ಶ್ವೇತಾಂಬರ ಸಮಿತಿ ಅಧ್ಯಕ್ಷ ಕಾಂತಿಲಾಲ್‌ಜೈನ್ ಮಾತನಾಡಿ, ಮಹಾವೀರರ ಜೀವನ ಶೈಲಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು. ಪುರಸಭೆ ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ ಮಾತನಾಡಿ, ಜೈನ ಸಮುದಾಯದವರ ಜೀವನಶೈಲಿ ಇತರರಿಗೆ ಮಾರ್ಗದರ್ಶಕವಾಗಿದೆ. ಸಮಾಜದಲ್ಲಿ ಶಾಂತಿ ಕಾಪಾಡಲು ಪ್ರಾಧಾನ್ಯತೆ ನೀಡುತ್ತಾರೆ ಎಂದರು.

ಮೆರವಣಿಗೆ ಜೈನ ಮಂದಿರದಿಂದ ಬೈಪಾಸ್ ರಸ್ತೆ ಮೂಲಕ ಬಸವೇಶ್ವರ ಪುತ್ಥಳಿವರೆಗೆ ಸಾಗಿ ದೇವಸ್ಥಾನಕ್ಕೆ ಹಿಂದಿರುಗಿತು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜೈನ ಶ್ವೇತಾಂಬರ ಸಮಿತಿಯ ಪ್ರಮುಖರಾದ ಮುಖೇಶ್ ಚೋಪ್ರಾ, ಪ್ರಕಾಶ್ ಕಾಂಕರೀಯ, ಮಹೇಂದ್ರ ಜೈನ್, ದಿನೇಶ ದಾರಿವಾಲ್, ಮಹಾವೀರ ಸಾಲೇಜ, ರಾಜೇಂದ್ರ ಕುಮಾರ್, ಪ್ರವೀಣ, ಮಹಿಳಾ ಮಂಡಳಿಯ ಡಿಂಪಲ್ ದಾರಿವಾಲ್, ಸನ್ನು ಚೋಪ್ರಾ, ಪಿಂಕಿ ತಾತೇಡು ಇದ್ದರು.