ಜಗಳೂರು: ದಶಕಗಳಿಂದ ನನೆಗುದಿಗೆ ಬಿದ್ದಿರುವ 11ಇ ನಕ್ಷೆ ಸಮಸ್ಯೆಗೆ ಪರಿಹಾರ ಒದಗಿಸಿ ಕೌಟುಂಬಿಕ ನೆಮ್ಮದಿ ಹಾಗೂ ಹಳ್ಳಿಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಆಂದೋಲನ ನೆರವಾಗಲಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹೇಳಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಬುಧವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ 11ಇ/ತತ್ಕಾಲ್ ಹಾಗೂ ಅಲಿನೇಷನ್ ಆಂದೋಲನದಲ್ಲಿ ಮಾತನಾಡಿದರು.
ಸುಮಾರು ವರ್ಷಗಳಿಂದಲೂ ಬಾಕಿ ಇರುವ 11ಇ ಸ್ವೀಕರಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಕಡತ ಇತ್ಯರ್ಥಗೊಳಿಸಲು ಸರ್ಕಾರದ ಆದೇಶವಾಗಿದೆ. ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ನಮ್ಮ ತಾಲೂಕಿನಲ್ಲಿರುವ ಎಲ್ಲ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಿ ಜನರನ್ನು ಸಮಸ್ಯೆಯಿಂದ ದೂರ ಮಾಡಬೇಕು ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆ ವ್ಯವಸ್ಥೆ ಬ್ರಿಟಿಷರ ಕಾಲದಿಂದಲೂ ಬಂದಿದೆ. ಶೇಕ್‌ದಾರ್, ಅಮಲ್ದಾರ್, ಕಮಿಷನರ್‌ನಿಂದ ಆರಂಭವಾಗಿದೆ, ಈಗ ತಹಸೀಲ್ದಾರ್, ಆರ್‌ಐ, ವಿಎಗಳ ಮೇಲೆ ಇಡಿ ಇಲಾಖೆಯ ಆಡಳಿತ ಜವಾಬ್ದಾರಿ ಇದೆ. ಇಲ್ಲಿಗೆ ತುಂಬ ವಯಸ್ಸಾದವರು, ಜೇಬಿನಲ್ಲಿ ಹಣವಿಲ್ಲದವರು, ದೇಹದಲ್ಲಿ ಶಕ್ತಿ ಇಲ್ಲದವರು ಬರುತ್ತಾರೆ. ಅವರನ್ನು ಅಲೆದಾಡಿಸುವುದು, ಹಣ ವಸೂಲಿ ಮಾಡುವುದು ಒಳ್ಳೆಯದಲ್ಲ, ಸಾಧ್ಯವಾದರೆ ಮಾಡಿಕೊಡಿ ಇಲ್ಲವೇ ಹಿಂಬರಹ ಕೊಡಿ ಆದರೆ ಸುಳ್ಳು ಹೇಳಿ ತಪ್ಪಿಸುವುದು ನೌಕರನಿಗೆ ಶೋಭೆ ತರುವುದಿಲ್ಲ. ಮನಸಾಕ್ಷಿಗೆ ವಿರುದ್ಧವಾದ ಕೆಲಸ ಮಾಡಬೇಡಿ ಎಂದು ಗ್ರಾಮಲೆಕ್ಕಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಿ
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗಿದ್ದು, ಪ್ರತಿಯೊಂದಕ್ಕೂ ಹಣದ ಬೇಡಿಕೆ ಇದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಅನಧಿಕೃತ ವ್ಯಕ್ತಿಗಳು, ಮಧ್ಯವರ್ತಿಗಳು ತಾಲೂಕು ಕಚೇರಿಯೊಳಗೆ ಕುಳಿತು ವ್ಯವಹಾರ ಮಾಡುವುದು, ಕೆಲಸ ಮಾಡುವುದು ಕಾನೂನು ಬಾಹಿರ. ಅದಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಬಿ. ದೇವೇಂದ್ರಪ್ಪ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಅರುಣ್‌ಕುಮಾರ್ ಕಾರಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ, ಸರ್ವೇ ಇಲಾಖೆ ಸಹಾಯೋಗದಲ್ಲಿ 11ಇ ಆಂದೋಲವನ್ನು ಹಮ್ಮಕೊಳ್ಳಲಾಗಿದೆ. ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಸುಮಾರು 860 ಅರ್ಜಿಗಳು ಬಾಕಿ ಉಳಿವೆ. ಒಂದು ದಿನದಲ್ಲಿ ಕನಿಷ್ಠ 300ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ರೂಪಾ, ಆರ್‌ಐ ಧನಂಜಯ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್ ಸೇರಿದಂತೆ ಮತ್ತಿತರಿದ್ದರು.