ಚಿಕ್ಕ ಗಂಡಸಿ ಮುಖ್ಯ ರಸ್ತೆಗೆ ಕುಸಿದು ಬಿದ್ದಿರುವ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕಾಂಪೌಂಡ್. 
ಜಿಲ್ಲೆ

ತಡರಾತ್ರಿ ಶಾಲಾ ಕಾಂಪೌಂಡ್ ಕುಸಿತ

ಗಂಡಸಿ: ಮೈಸೂರು-ಶಿವಮೊಗ್ಗ ರಾಜ್ಯ ಹೆದ್ದಾರಿ ಸಮೀಪದ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಒಂದು ಭಾಗದ ಕಾಂಪೌಂಡ್ ಶುಕ್ರವಾರ ತಡರಾತ್ರಿ ಕುಸಿದು ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.

ರಾತ್ರಿ 12ರ ಸಮಯದಲ್ಲಿ ಕಾಂಪೌಂಡ್ ಚಿಕ್ಕ ಗಂಡಸಿ ಮುಖ್ಯರಸ್ತೆಗೆ ಕುಸಿದು ಬಿದ್ದಿದೆ. ಈ ಅನಾಹುತ ರಾತ್ರಿ ವೇಳೆ ಸಂಭವಿಸಿರುವುದರಿಂದ ಶಾಲಾ ಮಕ್ಕಳ ಪ್ರಾಣ ಉಳಿಯಿತು ಎಂದು ಗ್ರಾಮಸ್ಥರು ನಿಟ್ಟಿಸಿರುಬಿಟ್ಟಿದ್ದಾರೆ. ಈ ಶಾಲೆಯ ಮುಂಭಾಗದಲ್ಲಿ ಚಿಕ್ಕ ಗಂಡಸಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಾದು ಹೋಗಿದ್ದು, ಪ್ರತಿದಿನ ಸಾರ್ವಜನಿಕರು, ವಾಹನಗಳು ಸಂಚರಿಸುತ್ತವೆ. ಈ ಶಾಲೆಯ ಮುಖ್ಯದ್ವಾರದ ಭಾಗದ ಕಾಂಪೌಂಡ್ ಎರಡೂ ಭಾಗವಾಗಿ ಬಿರುಕು ಬಿಟ್ಟಿದ್ದು, ಯಾವ ಸಮಯದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಪಾಲಕಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.

ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆಯೇ ಈ ಶಾಲೆಯ ಕಾಂಪೌಂಡ್ ಶಿಥಿಲಾವಸ್ಥೆ ತಲುಪಿ ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಮನಗಂಡ ಪಾಲಕರು, ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸ್ಥಳೀಯ ಗ್ರಾಮ ಪಂಚಾಯಿತಿಯವರಿಗೆ ಹಲವು ಬಾರಿ ಹೊಸ ಕಾಂಪೌಂಡ್ ಕಟ್ಟಿಸುವಂತೆ ಮನವಿ ಸಲ್ಲಿಸಿದರೂ ಅನುದಾನವಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾ ಬಂದಿದ್ದರು.

ಈಗಲಾದರೂ ಎತ್ತೆಚ್ಚು ಮತ್ತೆ ಇಂತಹ ಅನುಹುತ ಸಂಭಸುವ ಮುನ್ನ ಕಾಂಪೌಂಡ್ ನಿರ್ಮಿಸಿ, ಪಾಲಕರು, ಶಿಕ್ಷಕರು, ಮಕ್ಕಳ ಆತಂಕ ನಿವಾರಿಸುವಂತೆ ಗ್ರಾಮಸ್ಥರು, ಶಾಲಾ ಆಡಳಿತ ಮಂಡಳಿ ಸಂಬಂಧಪಟ್ಟ ಇಲಾಖೆಯವರಿಗೆ ಒತ್ತಾಯಿಸಿದ್ದಾರೆ.