ಪಾಂಡವಪುರ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಮೊದಲು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಿ ಬಳಿಕ ತಜ್ಞರ ಸಮಿತಿಯನ್ನು ಕರ್ನಾಟಕಕ್ಕೆ ಕಳುಹಿಸಿ ಇಲ್ಲಿನ ವಾಸ್ತವತೆ ಅರಿತು ನದಿ ನೀರು ಹಂಚಿಕೆ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ನೀರಿನ ವಿಚಾರದಲ್ಲಿ ಯಾವಾಗಲೂ ಕೆಳ ಭಾಗದ ಪ್ರದೇಶದವರಿಗೆ ಅನುಕೂಲತೆ ಹೆಚ್ಚು. ಮೇಲ್ಭಾಗದ ಪ್ರದೇಶದವರಿಗೆ ಅನನುಕೂಲಗಳೇ ಹೆಚ್ಚು. ಜತೆಗೆ ತಮಿಳುನಾಡಿನಲ್ಲಿ ಎರಡು ಮುಂಗಾರು ಲಭ್ಯತೆ ಇದೆ. ಅಕ್ಟೋಬರ್ ತಿಂಗಳಿನಿಂದ ಅಲ್ಲಿ ಎರಡನೇ ಮುಂಗಾರು ಆರಂಭವಾಗಲಿದೆ. ಆದರೆ ಕರ್ನಾಟಕಕ್ಕೆ ಒಂದೇ ಮುಂಗಾರು ಲಭ್ಯವಿರುವ ಕಾರಣ ನೀರಿನ ಕೊರತೆ ಎದುರಾಗಿದೆ. ಈ ವಿಷಯ ಗೊತ್ತಿದ್ದರೂ ತಮಿಳುನಾಡು ಕ್ಯಾತೆ ತೆಗೆದು ನೀರಿನ ವಿಷಯದಲ್ಲಿ ಯಾವಾಗಲೂ ರಾಜಕೀಯ ಮಾಡಿಕೊಂಡು ಬಂದಿದೆ. ನಮಗೆ ಯಾವಾಗಲೂ ಅನ್ಯಾಯವಾಗುತ್ತಿದೆ ಎಂದರು.
ಸೆ.6ರಂದು ಸುಪ್ರೀಂಕೋರ್ಟ್ ತೀರ್ಪುಯಾವ ರೀತಿ ಬರುತ್ತದೆ ಎಂಬುದನ್ನು ನೋಡಿಕೊಂಡು ರೈತ ಸಂಘದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಈಗಾಗಲೇ ಕಾಂಗ್ರೆಸ್ ಸರ್ಕಾರ ಕೂಡ ಈ ವಿಚಾರದಲ್ಲಿ ಹೋರಾಟ ನಡೆಸುತ್ತಿದೆ. ದೆಹಲಿಯಲ್ಲಿ ಕಾವೇರಿ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿ ನಿರಂತರ ಹೋರಾಟ ಮಾಡುತ್ತಿದ್ದಾರೆ ಎಂದರು.
ಹೋರಾಟಕ್ಕೆ ಕೈ ಜೋಡಿಸಿ: ಕಾವೇರಿ ನೀರು ಕುಡಿಯುವ ಬೆಂಗಳೂರಿಗರು ಕೂಡ ಕಾವೇರಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಡೆಪಾಸಿಟ್ ಮಾಡಿಸಲು ಚರ್ಚೆ: ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯ ಎಸಿ ಕಚೇರಿ ಹಾಗೂ ಪುರಸಭೆಯ ಚರಾಸ್ತಿ ಮತ್ತು ವಾಹನಗಳ ಜಪ್ತಿ ಮಾಡಿರುವ ಕುರಿತು ಡಿಸಿ ಅವರೊಂದಿಗೆ ಚರ್ಚೆ ನಡೆಸಿ ನ್ಯಾಯಲಯಕ್ಕೆ ಪರಿಹಾರದ ಹಣ ಡಿಪಾಸಿಟ್ ಮಾಡಿಸಲು ಕ್ರಮ ವಹಿಸುವುದಾಗಿ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.