ಜಿಲ್ಲೆ

ತಜ್ಞರ ಕೈಯಲ್ಲಿ ಶಿಕ್ಷಣ ವ್ಯವಸ್ಥೆ ಇರಬೇಕು

ಬಳ್ಳಾರಿ : ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಶಿಕ್ಷಣದಲ್ಲಿ ಹಸ್ತಕ್ಷೇಪ ಮಾಡಬಾರದು. ತಜ್ಞರ ಸಮಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಇರಬೇಕು ಎಂದು ಗದಗ ಮತ್ತು ವಿಜಯನಗರ ಜಿಲ್ಲೆಯ ರಾಮಕೃಷ್ಣ ವಿವೇಕಾನಂದಾ ಆಶ್ರಮ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ನಗರದ ವಿಎಸ್‌ಕೆ ವಿವಿಯ ಬಯಲು ರಂಗಮಂದಿರದಲ್ಲಿ ಅಯೋಜಿಸಿದ್ದ ವಿವಿಯ 15ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕೀಯ ಹಸ್ತಕ್ಷೇಪದಿಂದನೇ ಇಂದಿನ ಭಾರತದ ಇತಿಹಾಸ ಪುಸ್ತಕಗಳಲ್ಲಿ ಬೇತಾಳನ ಕಥೆಗಳು ತುಂಬಿವೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾಚೀನ ಕಾಲದಲ್ಲಿಯೇ ಭಾರತ ನಾಗಕರಿಕತೆಯಲ್ಲಿ ತುತ್ತ ತುದಿ ಮುಟ್ಟಿತ್ತು. ಪಾಶ್ಚಿಮಾತ್ಯ ದೇಶಗಳಂತೆ ಕೊಳ್ಳೆ ಒಡೆಯುವುದು, ವಿವಿಗಳನ್ನು ಸುಟ್ಟು ಹಾಕುವಂತ ಮನಸ್ಥಿತಿ ಭಾರತೀಯರಿಗೆ ಇರಲಿಲ್ಲ. ಆಗಿನ ಕಾಲದಲ್ಲಿಯೇ ವಿಶ್ವವಿದ್ಯಾಲಯಗಳು ಹೇಗೆ ಇರಬೇಕು ಎಂದು ಬೇರೆ ದೇಶಗಳಿಗೆ ಹೇಳಿಕೊಟ್ಟ ಇತಿಹಾಸ ಪರಂಪರೆ ನಮ್ಮದು. ಇತ್ತೀಚಿನ ಅಮೆರಿಕದ ಹಲವು ಶಾಲೆಗಳಲ್ಲಿ ಹತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಎಂಟು ವಿದ್ಯಾರ್ಥಿಗಳು ಭಾರತೀಯರಾಗಿದ್ದಾರೆ. ಮಹಾಸರಸ್ವತಿಗಳ ತವರೂರು ಭಾರತ. ಒಂದೇ ಬಾರಿಗೆ ನಾಲ್ಕು ವಿಭಾಗಗಳನ್ನು ಓದುವ ಅಗಾದವಾದ ಶಕ್ತಿ ಭಾರತೀಯರಲ್ಲಿದೆ. ಆದರೆ, ಕೆಲವರು ಮಾನಸಿಕವಾಗಿ ನಮ್ಮಲ್ಲಿ ಕೀಳುರಿಮೆ ತುಂಬಿದ್ದಾರೆ. ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕುರಿಗಳಂತೆ ಜೀವಿಸುತ್ತಿದ್ದೇವೆ. ಜಗತ್ತಿನ ಪಾಪಗಳಲ್ಲಿ ಒಂದಾದ ನಾನು ಕೈಲಾಗದವನು ಎಂದು ಕೊಳ್ಳುವುದೆ ಒಂದು ದೊಡ್ಡ ಪಾಪವಾಗಿದೆ. ಆದ್ದರಿಂದ ಇಂತಹ, ವ್ಯವಸ್ಥೆಯಿಂದ ಹೊರಗಡೆ ಬರಬೇಕು ಎಂದರು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಏನನ್ನು ಚಿಂತಿಸಬೇಕು ಅಲ್ಲ, ಹೇಗೆ ಚಿಂತಿಸಬೇಕು ಎಂಬುದನ್ನು ಕಲಿಸಬೇಕು. ವಿದ್ಯಾರ್ಥಿಗಳು ಗುರು ವಾಕ್ಯದಲ್ಲಿ ಶ್ರದ್ಧೆ ಇರಬೇಕು, ಗುರುವಿನಲ್ಲಿ ದೇವರನ್ನು ಕಾಣಿ ಎಂದು ಕಿವಿ ಮಾತು ಹೇಳಿದರು. ವಿಶ್ವಾಮಿತ್ರ, ವಾಲ್ಮೀಕಿ ಅಂತಹ ದುಷ್ಟರು ಯಾರು ಇಲ್ಲ. ಆದರೆ, ಭಾರತದಲ್ಲಿಯೇ ಅಂತಹ ಪೂಜ್ಯರು ಯಾರು ಇಲ್ಲ. ಭಾರತದ ರಕ್ತದಲ್ಲಿದೆ ಪ್ರಜ್ಞಾವಂತ ಎಂಬ ಶಕ್ತಿ ಎಂದು ಹೇಳಿದರು.
ವಿವಿ ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ವಿಎಸ್‌ಕೆ ವಿವಿ ಕಳೆದ ಹದಿನಾಲ್ಕು ವರ್ಷಗಳಿಂದ ಅಂಬೆಗಾಲು ಇಡುತ್ತಾ ಸಾಗಿದೆ. ನಾಲ್ಕು ವಿಭಾಗಗಳಿಂದ ಆರಂಭವಾದ ವಿವಿ ಇಂದು 29 ವಿಭಾಗಗಳ ಮಟ್ಟಿಗೆ ಬೆಳೆದಿದೆ. ವಿವಿ ಆವರಣದಲ್ಲಿ ಪರಿಸರಕ್ಕೆ ಒತ್ತು ನೀಡಿದ್ದರಿಂದ ಹಸರೀಕರಣವಾಗಿ ಕಾಣುತ್ತಿದೆ. ರಾಜ್ಯದಲ್ಲಿ 101 ಕೋಟಿ ರೂ. ಬ್ಯಾಂಕ್ ಖಾತೆಯಲ್ಲಿ ಹೊಂದಿರುವ ಏಕೈಕ ವಿಶ್ವವಿದ್ಯಾಲಯ ವಿಎಸ್‌ಕೆ ವಿವಿಯಾಗಿದೆ. ಆರಂಭದಲ್ಲಿ ಕುಲಸಚಿವರಾಗಿ ನೇಮಕವಾದ ವೇಳೆ ಕೆಲ ಆವರಣದಲ್ಲಿ ಕೆಲ ಪ್ರತಿಭಟನೆಗಳು ನಡೆದವು. ಆದರೆ, ಸದ್ಯ ಅಂತಹ ಪರಿಸ್ಥಿತಿಯಿಲ್ಲ. ಎಲ್ಲ ಭೋಧಕ ಹಾಗೂ ಭೋದಕತೇರ ಸಿಬ್ಬಂದಿ ಒಂದು ತಂಡದಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ವಿಎಸ್‌ಕೆ ವಿವಿ ಕುಲಪತಿ ಜೆ. ತಿಪ್ಪೇರುದ್ರಪ್ಪ, ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಹಾವೇರಿಯ ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಮಾತನಾಡಿದರು.
ಸಂಗೀತ ನಿರ್ದೇಶಕ ನಗರ ಕೃಷ್ಣಉಡುಪ, ಗಾಯಕರಾಗಿ ಸುನಿತಾ, ಶ್ರೀನಿವಾಸ ಹಾಗೂ ವಿನಯ್ ನಾಡಿಗ್ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ನಡೆದವು.