ಜಯಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಭಾ ಕಾರ್ಯಕ್ರಮವನ್ನು ಡಿಸಿ ಮೀನಾ ನಾಗರಾಜ್ ಉದ್ಘಾಟಿಸಿದರು. ಸಚಿವರಾದ ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಶಾಸಕ ಟಿ.ಡಿ.ರಾಜೇಗೌಡ, ಕುಕ್ಕುಡಿಗೆ ರವೀಂದ್ರ, ಕೆ.ಪಿ.ಅಂಶುಮಂತ್ ಇತರರಿದ್ದರು.  
ಜಿಲ್ಲೆ

ತಜ್ಞ ವೈದ್ಯರ ನೇಮಕಕ್ಕೆ ಕ್ರಮ

ಜಯಪುರ: ಸರ್ಕಾರಿ ಆಸ್ಪತ್ರೆಗಳನ್ನು ಬಡವರು ಹಾಗೂ ಸಾಮಾನ್ಯ ವರ್ಗದವರು ಹೆಚ್ಚಾಗಿ ಆಶ್ರಯಿಸಿದ್ದು, ಅವುಗಳ ಸುಧಾರಣೆಗಾಗಿ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಕಡ್ಡಾಯ ವೈದ್ಯಕೀಯ ಸೇವಾ ಕಾನೂನು ಜಾರಿಮಾಡುವ ಮೂಲಕ 1850 ಎಂಬಿಬಿಎಸ್ ವೈದ್ಯರ ನೇಮಕಾತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಜ್ಞ ವೈದ್ಯರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳವಾರ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಬಹುತೇಕ ಸಮಸ್ಯೆ ಪರಿಹಾರ ಮಾಡಲಾಗಿದೆ. ಕೇವಲ ಟೀಕೆಗಾಗಿ ಬಿಜೆಪಿಗರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದು, ಬಿಜೆಪಿಯದ್ದು ಜನರನ್ನು ವಿಘಟನೆ ಮಾಡುವ ರಾಜಕಾರಣವಾದರೆ, ಕಾಂಗ್ರೆಸ್‌ನದು ಜಾತಿ, ಮತ, ಭೇದ ಇಲ್ಲದೆ ಸರ್ವರೂ ಸಮಾನರು ಎಂಬ ಧರ್ಮ ರಾಜಕಾರಣ ಎಂದರು.

ವಿಧಾನಸೌಧದಲ್ಲಿ ಪ್ರತಿ ಸಚಿವರನ್ನೂ, ಸಚಿವಾಲಯದ ಕಚೇರಿಯನ್ನೂ ಕ್ಷೇತ್ರದ ಕೆಲಸಕ್ಕಾಗಿ ಪದೇ ಪದೆ ಭೇಟಿ ಮಾಡುವ ಅಪರೂಪದ ಶಾಸಕ ಟಿ.ಡಿ.ರಾಜೇಗೌಡ. ಇಂಥ ಶಾಸಕರಿಗೂ ಕೊಡಬಾರದ ತೊಂದರೆ ಕೊಡುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಟಿ.ಡಿ.ರಾಜೇಗೌಡ ಅವರ ಬೆಂಬಲಕ್ಕೆ ನಾನು ಹಾಗೂ ನಮ್ಮ ಸರ್ಕಾರ ಇದೇ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಡಿಸಿ ಮೀನಾ ನಾಗರಾಜ್, ಎಸ್ಪಿ ವಿಕ್ರಂ ಅಮಟೆ, ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರೀಟಿ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಡಾ. ಅಂಶುಮಂತ್, ಡಾ. ಸುಧೀಂದ್ರ, ಗ್ರಾಪಂ ಅಧ್ಯಕ್ಷ ಕರುಣಾಕರ, ಸದಸ್ಯ ಪಣಿರಾಜ್ ಇತರರಿದ್ದರು.