ಅರಕಲಗೂಡು: ತಾಲೂಕಿನಲ್ಲಿ ಅಪಾಯ ಮಟ್ಟ ಮೀರಿ ಕಾವೇರಿ ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರದ ತಗ್ಗು ಪ್ರದೇಶದಲ್ಲಿನ ಹೊಗೆಸೊಪ್ಪು ಗಿಡಗಳು ನೀರಿನಲ್ಲಿ ಮುಳುಗಿವೆ.
ಕೆಲ ದಿನಗಳಿಂದ ಎಡಬಿಡದೆ ಅಬ್ಬರಿಸುತ್ತಿರುವ ಮಳೆ ಆರ್ಭಟಕ್ಕೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಹೊಗೆಸೊಪ್ಪು ಬೆಳೆ ಪ್ರವಾಹದ ನೀರಿನಲ್ಲಿ ಮುಳುಗಿ ಕೊಳೆಯುತ್ತಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಯ ಹಲವೆಡೆ ಬೆಳೆಗಳು ಜಲಾವೃತವಾಗಿದೆ. ಅಲಸಂದೆ, ಉದ್ದು, ಹೆಸರು, ಎಳ್ಳು ಹಾಗೂ ತೋಟದ ಬೆಳೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿ ಹಾನಿಯಾಗಿವೆ. ಕೆಲ ರೈತರು ಪ್ರವಾಹದ ನೀರಿನಲ್ಲೇ ತಂಬಾಕು ಎಲೆಗಳನ್ನು ಕಟಾವು ಮಾಡುತ್ತಿದ್ದ ದೃಶ್ಯ ಕಂಡುಬಂತು.
ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವ ಪರಿಣಾಮ ಈ ಭಾಗದ ಜಮೀನಿಗೆ ನೀರು ನುಗ್ಗುತ್ತಿದ್ದು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಹಾಳಾಗಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಹಾರಂಗಿ ಜಲಾಶಯದ ನೀರನ್ನು ಏಕಾಏಕಿ ನದಿಗೆ ಹರಿಸುತ್ತಿರುವುದರಿಂದ ಬೆಳೆಗಳಿಗೆ ಕಂಟಕವಾಗುತ್ತಿದೆ ಎಂದು ರೈತರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಟಾವು ಹಂತಕ್ಕೆ ಬಂದಿದ್ದ ತಂಬಾಕು ಗಿಡಗಳು ನಾಶವಾಗಿದೆ. ಬೆಳೆಗಾಗಿ ಮಾಡಿದ್ದ ಸಾಲ ತೀರಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ ಎಂದು ಬೆಳೆಗಾರರು ಅವಲತ್ತುಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಬಿಡುವಿಲ್ಲದೇ ಸುರಿದಿದ್ದ ಮಳೆ ಸೋಮವಾರ ಬೆಳಗ್ಗೆ ಒಂದಿಷ್ಟು ಬಿಡುವು ನೀಡಿತ್ತು. ಮಧ್ಯಾಹ್ನದ ನಂತರ ಸುರಿಯುತ್ತಿದ್ದು ಮತ್ತಷ್ಟು ಬೆಳೆ ಹಾಳಾಗುವ ಆತಂಕ ಮನೆ ಮಾಡಿದೆ.
ಮನೆ ಗೋಡೆ ಕುಸಿತ: ಸತತ ಮಳೆಗೆ ತಾಲೂಕಿನ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸೌಮ್ಯಾ ಎಂಬುವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದು ಬಿದ್ದ ವೇಳೆ ಮನೆಯೊಳಗೆ ಯಾರೂ ಇಲ್ಲದಿದ್ದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.