ಜಿಲ್ಲೆ

ತಗ್ಗಿನ ಆಂಜನೇಯಸ್ವಾಮಿ ಕಾರ್ತಿಕ ಸಂಪನ್ನ

ಚಿತ್ರದುರ್ಗ: ಬುರುಜನಹಟ್ಟಿಯ ತಗ್ಗಿನ ಆಂಜನೇಯಸ್ವಾಮಿ ದೇಗುಲದಲ್ಲಿ ಪ್ರಸಕ್ತ ಸಾಲಿನ ಕಡೇ ಕಾರ್ತಿಕ ಮಹೋತ್ಸವ ಶನಿವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಕಾರ್ತಿಕೋತ್ಸವದ ಅಂಗವಾಗಿ ಆಂಜನೇಯಸ್ವಾಮಿ, ಗಣಪತಿ, ಉತ್ಸವ ಮೂರ್ತಿಗಳಿಗೆ ತುಳಸಿ, ಹೊಂಬಾಳೆ, ಗುಲಾಬಿ, ಸಂಪಿಗೆ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಸೇವಂತಿ, ಚೆಂಡು, ಪತ್ರೆ ಸೇರಿ ವಿವಿಧ ಬಗೆಯ ಪುಷ್ಪಗಳಿಂದ ಅತ್ಯಾಕರ್ಷಕವಾಗಿ ಅಲಂಕಾರ ಸೇವೆ ನಡೆಯಿತು.

ದೇಗುಲದ ಆವರಣ ಬಾಳೆಕಂದು, ಮಾವಿನ ಎಲೆ ಸೇರಿ ತಳಿರು ತೋರಣ, ಹೂವಿನ ಮಾಲೆ ಹಾಗೂ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು.

ದೇಗುಲದ ಅರ್ಚಕರಾದ ಸಿ.ಆರ್.ಕೃಷ್ಣಪ್ಪ, ಸಿ.ಆರ್.ಕಿರಣ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯ ಜರುಗಿದವು. ನೂರಾರು ಭಕ್ತರು ದರ್ಶನ, ಮಹಾಮಂಗಳಾರತಿ ಪಡೆದು, ಪೂಜಾ ಸಾಮಾಗ್ರಿ ಸಮರ್ಪಿಸಿ, ಹೊರಭಾಗದಲ್ಲಿ ದೀಪ ಹಚ್ಚಿ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು. ನಂತರ ಪ್ರಸಾದ ವಿತರಿಸಲಾಯಿತು.