ತಾಲೂಕಿನ ತಗರೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಕಾಣಿಸಿಕೊಂಡ ಬೆಂಕಿ ನಂದಿಸುವಲ್ಲಿ ಮುಂದಾಗಿರುವ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ. 
ಜಿಲ್ಲೆ

ತಗರೆ ಮೀಸಲು ಅರಣ್ಯದಲ್ಲಿ ಕಾಳ್ಗಿಚ್ಚು

ಬೇಲೂರು: ತಾಲೂಕಿನ ತಗರೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೊಡ್ಡ ಅನಾಹುತ ನಡೆಯುವ ಮುನ್ನ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮಂಗಳವಾರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿ ಬಿದ್ದಿರುವ ಬಗ್ಗೆ ಅರಣ್ಯ ಸಿಬ್ಬಂದಿ ಗಮನಿಸಿದರು. ತಕ್ಷಣವೇ ಬೆಂಕಿ ನಂದಿಸಲು ಪ್ರಯತ್ನಿಸುತ್ತಲೇ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಹೆಚ್ಚು ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಮುಂದಾದರು. ಆದರೆ ಗಾಳಿಯ ರಭಸ ಹೆಚ್ಚಾಗಿದ್ದರಿಂದ ಬೆಂಕಿ ತನ್ನ ಕೆನ್ನಾಲಿಗೆಯನ್ನು ಹೆಚ್ಚಿಸತೊಡಗಿತು. ತಕ್ಷಣವೇ ಬೇಲೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಹೊತ್ತಿ ಉರಿಯುತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ಅರಣ್ಯ ಪ್ರದೇಶದ ಅಕ್ಕಪಕ್ಕದ ಜಮೀನಿನವರು ಹಾಗೂ ವಾಸದ ಮನೆಗಳವರು ನಿಟ್ಟುಸಿರು ಬಿಡುವಂತಾಯಿತು. ಅಲ್ಲದೆ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಉಪ ವಲಯ ಅರಣ್ಯಾಧಿಕಾರಿ ಎಂ.ಎಸ್.ವೇದರಾಜು, ತಗರೆ ಮೀಸಲು ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಸರಿಯಾದ ಸಮಯಕ್ಕೆ ಬಂದು ಸಂಪೂರ್ಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳು, ವಿವಿಧ ಪ್ರಭೇದದ ಪ್ರಾಣಿ, ಪಕ್ಷಿಗಳು ಹಾಗೂ ಇತರ ಜೀವಜಂತುಗಳು ಜೀವಿಸುತ್ತ್ತಿವೆ. ಔಷಧ ಗುಣಗಳಿರುವ ವಿವಿಧ ಜಾತಿಯ ಸಸ್ಯ ಮತ್ತು ಗಿಡ ಮೂಲಿಕೆಗಳಿರುವುದರಿಂದ ಇವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಅರಣ್ಯ ಪ್ರದೇಶದ ಸುತ್ತಮುತ್ತ ಕಸದ ರಾಶಿಗೆ ಬೆಂಕಿ ಹಾಕುವುದು ಅಥವಾ ಬೀಡಿ, ಸಿಗರೇಟು ಸೇದಿ ರಸ್ತೆ ಬದಿಯಲ್ಲಿ ಬಿಸಾಡುವುದರಿಂದ ಈ ರೀತಿಯ ಬೆಂಕಿ ಅವಘಡ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಅವಘಡ ಮರುಕಳಿಸದಂತೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.