ಜಿಲ್ಲೆ

ತಂಬಾಕು ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸೋಣ: ತಾಲೂಕು ಯೋಜನಾಧಿಕಾರಿ ಸಾರಿಕಾ

ಹಾಸನ: ಬಡವರ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ ಎಂದು ತಾಲೂಕು ಯೋಜನಾಧಿಕಾರಿ ಸಾರಿಕಾ ಅವರು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ವಿಶ್ವ ತಂಬಾಕು ನಿರ್ಮೂಲನಾ ದಿನಾಚರಣೆ ಅಂಗವಾಗಿ ಶನಿವಾರ ವಿಜಯನಗರ ಬಡಾವಣೆಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ 10 ಕೋಟಿಗೂ ಅತೀ ಹೆಚ್ಚು ಜನ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆಯಿಂದ ವ್ಯವಸನಿಗಳು ಮಾತ್ರವಲ್ಲದೆ, ಅವರ ಸುತ್ತ ಇರುವ ಜನರೂ ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಆರೋಗ್ಯ ಸಹಾಯಕಿ ಜ್ಯೋತಿ ಮಾತನಾಡಿ, ತಂಬಾಕು ಸೇವನೆ ಅತ್ಯಂತ ಅಪಾಯಕಾರಿ. ತಂಬಾಕು ಸೇವನೆಯಿಂದ ಹೃದಯಾಘಾತ, ರಕ್ತದ ಒತ್ತಡ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಉಲ್ಬಣಗೊಳ್ಳುವುದರಿಂದ ಮನುಷ್ಯನ ಜೀವಕ್ಕೆ ಸಂಚಕಾರ ತರಲಿದೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಇದ್ದರೂ ಅವುಗಳನ್ನು ಖರೀದಿಸಿ ಸೇವನೆ ಮಾಡುವ ಮೂಲಕ ತಮ್ಮ ಜೀವಕ್ಕೆ ತಾವೇ ಕುತ್ತು ತಂದು ಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ತಂಬಾಕಿನ ವಿಷಕಾರಿ ಅಂಶಗಳಿಂದ ಜನರ ಜೀವನ ಹಾಳಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಮೂಲಕ ತಂಬಾಕು ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಉಪಯುಕ್ತ ಮಾಹಿತಿಗಳಿವೆ. ಅವುಗಳನ್ನು ಅರಿತುಕೊಂಡರೆ ಸ್ವ- ಇಚ್ಛೆಯಿಂದ ತಂಬಾಕು ಹಾಗೂ ಮದ್ಯಸೇವನೆ ತ್ಯಜಿಸಬಹುದು ಎಂದು ಸಲಹೆ ನೀಡಿದರು.

ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧವಾಗಿದೆ. ಯಾರೂ ಕೂಡ ಬಾಲ್ಯ ವಿವಾಹ ಮಾಡಬಾರದು. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಇಂತಹ ಪ್ರಕರಣಗಳು ಕಂಡು ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದರು.

ಇನ್ನು ಮಲೇರಿಯಾ ಬಗ್ಗೆ ಹೆಚ್ಚಿನ ಜಾಗೃತಿ ಅತ್ಯಗತ್ಯ. ಮಲೇರಿಯಾ ಕಾಯಿಲೆಗೆ ಕಾರಣವಾಗಿರುವ ಸೊಳ್ಳೆಗಳ ನಿರ್ಮೂಲನೆಗೆ ಎಲ್ಲರೂ ಗಮನ ಹರಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ. ಹಾಗಾಗಿ ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಉಮಾದೇವಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಬಬಿತಾ, ಒಕ್ಕೂಟದ ಅಧ್ಯಕ್ಷರಾದ ಭಾಗ್ಯಾ, ಸೇವಾ ಪ್ರತಿನಿಧಿಗಳು ಇದ್ದರು.