ಜಿಲ್ಲೆ

ತಂಬಾಕು ಬೆಳೆ ವೀಕ್ಷಿಸಿದ ಮಂಡಳಿ ನಿರ್ದೇಶಕಿ

ಹನಗೋಡು: ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯ ಕೊತ್ತೇಗಾಲ, ಕಲ್ಲಹಳ್ಳಿ ಹಾಗೂ ಚಿಲ್ಕುಂದ ಗ್ರಾಮಗಳ ತಂಬಾಕು ಬೆಳೆ ಜಮೀನುಗಳಿಗೆ ಕೇಂದ್ರೀಯ ತಂಬಾಕು ಮಂಡಳಿ ನಿರ್ದೇಶಕಿ ವಿಶ್ವಶ್ರೀ ಅವರು ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಭೇಟಿ ನೀಡಿ ತಂಬಾಕು ಬೆಳೆಯನ್ನು ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದರು.

ಈ ಬಾರಿ ಮುಂಗಾರು ಮಳೆ ಹೆಚ್ಚು ಸುರಿದ ಪರಿಣಾಮ ಬೆಳೆಗೆ ಕೊಟ್ಟ ಗೊಬ್ಬರವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಭೂಮಿಯಲ್ಲಿ ಅತಿ ಹೆಚ್ಚು ತೇವಾಂಶ ಕೂಡಿದ್ದರಿಂದ ಬೆಳೆ ಸರಿಯಾಗಿ ಬಾರದೇ ಇಳುವರಿ ಕಡಿಮೆಯಾಗಿದೆ. ಈ ನಡುವೆಯೂ ಬೆಳೆದಿರುವ ತಂಬಾಕಿನ ಗುಣಮಟ್ಟ ಕಡಿಮೆಯಾಗಿದೆ. ಕಾರ್ಮಿಕರ ಕೂಲಿ ಹಾಗೂ ಸೌದೆ ಬೆಲೆ ದುಪ್ಪಟ್ಟಾಗಿದೆ ಎಂದು ಮಾಹಿತಿ ನೀಡಿ, ಈ ಬಾರಿ ತಂಬಾಕಿಗೆ ಉತ್ತಮ ಬೆಲೆ ದೊರಕಿಸಲು ಕೇಂದ್ರಿಯ ತಂಬಾಕು ಮಂಡಳಿ ಪ್ರಯತ್ನಿಸಬೇಕೆಂದು ರೈತರು ಮನವಿ ಮಾಡಿದರು.

ಕೇಂದ್ರ ತಂಬಾಕು ಮಂಡಳಿಯ ನಿರ್ದೇಶಕಿ ವಿಶ್ವಶ್ರೀ ಮಾತನಾಡಿ, ಈ ಭಾಗದ ಕೆಲ ರೈತರು ಅವಧಿ ಮೊದಲೇ ಬೆಳೆ ನಾಟಿ ಮಾಡಿದ ಪರಿಣಾಮ ಬೆಳೆ ಕುಂಠಿತವಾಗಿದೆ. ಸಕಾಲದಲ್ಲಿ ನಾಟಿ ಮಾಡಿರುವ ತಂಬಾಕು ಬೆಳೆ ಶೇ.90ರಷ್ಟು ಉತ್ತಮವಾಗಿದ್ದು, ಗುಣಮಟ್ಟದಿಂದ ಕೂಡಿದೆ ಎಂಬ ಮಾಹಿತಿ ಇದೆ. ರೈತರು ಹೆಚ್ಚಿನ ಪ್ರದೇಶದಲ್ಲಿ ಕಡಿಮೆ ಇಳುವರಿ ಹಾಗೂ ಗುಣಮಟ್ಟವಿಲ್ಲದ ಬೆಳೆ ಬೆಳೆಯುವ ಬದಲು ಕಡಿಮೆ ವಿಸ್ತೀರ್ಣ ಪ್ರದೇಶದಲ್ಲಿ ಹೆಚ್ಚಿನ ಇಳುವರಿಯೊಂದಿಗೆ ಗುಣಮಟ್ಟದ ಬೆಳೆ ಬೆಳೆಯಲು ಪ್ರಯತ್ನಿಸಿ. ಇದರಿಂದ ಕಡಿಮೆ ಖರ್ಚಿನೊಂದಿಗೆ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತದೆ. ತಂಬಾಕು ಜತೆಗೆ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿರೆಂದು ಸಲಹೆ ನೀಡಿದರೆಲ್ಲದೆ, ಕರ್ನಾಟಕದ ತಂಬಾಕಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಯಾರೂ ಕಾಳಸಂತೆಯಲ್ಲಿ ತಂಬಾಕು ಮಾರಾಟ ಮಾಡದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದು ಮನವಿ ಮಾಡಿದರು.

ಮೈಸೂರು ಪ್ರಾದೇಶಿಕ ವ್ಯವಸ್ಥಾಪಕರಾದ ಎಚ್. ಕೆ.ಗೋಪಾಲ್, ಮಾರಣ್ಣ, ವ್ಯವಸ್ಥಾಪಕಿ ಜೆ.ಸುರೇಖಾ, ಚಿಲ್ಕುಂದ ಹರಾಜು ಮಾರುಕಟ್ಟೆ ಅಧೀಕ್ಷಕ ಸಿದ್ದರಾಮ್ ಡೆಂಗೆ, ಕ್ಷೇತ್ರಾಧಿಕಾರಿಗಳಾದ ಸುದೀಪ್, ರೂಪಾ, ಪ್ರಗತಿಪರ ರೈತರಾದ ಶಿವಣ್ಣ, ಶಿವಬಸಪ್ಪ, ಕರುಣಾಕರ, ಪ್ರವೀಣ, ಮಾದೇಗೌಡ, ಸುರೇಶ್, ಮಾದೇವಪ್ಪ ಹಾಗೂ ರೈತ ಮುಖಂಡರು ಹಾಜರಿದ್ದರು.