ಹುಣಸೂರು: ತಂಬಾಕು ಕೃಷಿಯಲ್ಲಿ ಸುಧಾರಣೆ ಮತ್ತು ರೈತರಲ್ಲಿ ಜಾಗೃತಿ ಮೂಡಿಸಲು ತಂಬಾಕು ಮಂಡಳಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂ ರಾಜೇಗೌಡ ತಿಳಿಸಿದರು.
ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಂಡಳಿಯಲ್ಲಿ ಶನಿವಾರ ತಂಬಾಕು ಹರಾಜು ಮಂಡಳಿ ಸಂಸ್ಥಾಪನಾ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬೆಳೆಗಾರರ ಮಾಹಿತಿ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿದರು.
ತಂಬಾಕು ಮಂಡಳಿ ರಾಜ್ಯದಲ್ಲಿ ಆರಂಭವಾಗಿ 50ನೇ ವರ್ಷ ಪ್ರಗತಿಯಲ್ಲಿದ್ದು, ಪ್ರಸುತ ವರ್ಷ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬೆಳೆಗಾರರಿಗೆ ತಂಬಾಕು ಬೆಳೆ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮಂಡಳಿ ಅಧಿಕಾರಿಗಳು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ತಂಬಾಕು ಬೆಳೆಗಾರನಿಗೆ ಬೆಳೆಯ ಬಗ್ಗೆ ಸಮಗ್ರ ಜ್ಞಾನ ನೀಡುವ ನಿಟ್ಟಿನಲ್ಲಿ ವಿಜ್ಞಾನಗಳೊಂದಿಗೆ ಸಂವಾದ ಹಮ್ಮಿಕೊಳ್ಳುವುದು, ಬೇಸಾಯದಲ್ಲಿ ತಂತ್ರಜ್ಞಾನ ಬಳಕೆ ಹಾಗೂ ಹೊಸ ಆವಿಷ್ಕಾರಗಳ ಕುರಿತಂತೆ ಚರ್ಚೆ, ಭವಿಷ್ಯದಲ್ಲಿ ತಂಬಾಕು ಮಾರುಕಟ್ಟೆ ಸ್ಥಿತಿಗತಿ ಕುರಿತು, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಕುರಿತಂತೆ ಗೋಷ್ಠಿಗಳು ನಡೆಯಲಿದ್ದು, ಮಂಡಳಿ ಆಯೋಜಿಸುವ ಗೋಷ್ಠಿಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.
ತಂಬಾಕು ಹರಾಜು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ರಘುನಂದನ್ ಮಾತನಾಡಿ, ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದ್ದು, ರೈತರು ವಿಳಂಬ ಮಾಡದೆ ಮಾರುಕಟ್ಟೆಯಲ್ಲಿ ಭಾಗವಹಿಸಿ ಬೆಳೆದ ಸೊಪ್ಪು ಮಾರಾಟ ಮಾಡಲು ಸಹಕರಿಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್. ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಡಾ.ಎಸ್.ರಾಮಕೃಷ್ಣನ್, ಮಂಡಳಿ ಸದಸ್ಯ ದಿನೇಶ್ ಮಾತನಾಡಿದರು.
ಮುಖಂಡರಾದ ಮೋದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ಅಗ್ರಹಾರ ರಾಮೇಗೌಡ, ಸತೀಶ್,ತಟ್ಟೆಕೆರೆ ಶ್ರೀನಿವಾಸ್, ಹರೀಶ್ ಹಾಗೂ ಬೆಳೆಗಾರರು ಭಾಗವಹಿಸಿದ್ದರು.