ಜಿಲ್ಲೆ

ತಂಬಾಕು ಪ್ರದೇಶಗಳಿಗೆ ದಾಮೋದರ ರೆಡ್ಡಿ ಭೇಟಿ

ಮೈಸೂರು : ಹುಣಸೂರು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ನಿರ್ದೇಶಕ ರಾಜಮಂಡ್ರಿಯ ಡಾ.ಡಿ. ದಾಮೋದರ ರೆಡ್ಡಿ ತಾಲೂಕಿನ ತಂಬಾಕು ಬೆಳೆವ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.
ತಾಲೂಕಿನ ಬನ್ನಿಕುಪ್ಪೆ, ಹಗರನಹಳ್ಳಿ, ಸೋಮನಹಳ್ಳಿ, ಉಯಿಗೌಡನಹಳ್ಳಿ, ಮರೂರು, ಮರದೂರು, ಕೊತ್ತೇಗಾಲ ಮುಂತಾದ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಹದಗೊಳಿಸಿದ ಹೊಗೆಸೊಪ್ಪುಗಳನ್ನು ಪರಿಶೀಲಿಸಿದರು. ರೈತರಿಂದ ಈ ಬಾರಿಯ ಬೆಳೆಯ ಕುರಿತು ಮಾಹಿತಿ ಪಡೆದರು. ಈ ವೇಳೆ ಅತಿಯಾದ ಮಳೆಯಿಂದಾಗಿ ತಂಬಾಕು ಬೆಳೆಯಲ್ಲಿನ ಗುಣಮಟ್ಟ ಮತ್ತು ಇಳುವರಿ ಕುಂಠಿತವಾಗಿರುವ ಕುರಿತು ರೈತರು ನಿರ್ದೇಶಕರಿಗೆ ಎಳೆಎಳೆಯಾಗಿ ಬಿಡಿಸಿಟ್ಟರು.
ಅತಿಯಾದ ತೇವಾಂಶ, ಸೂರ್ಯನೆ ಕಾಣದ ವಾರಗಟ್ಟಲೆ ದಿನಗಳು, ಭೂಮಿಯಲ್ಲಿ ನೀರಿನಂಶದ ಹೆಚ್ಚಳ, ಕೊಳೆತ ಗಿಡಗಳು, ಕೊಚ್ಚಿಹೋದ ರಾಸಾಯನಿಕ ಗೊಬ್ಬರ, 2-3 ಬಾರಿ ಗೊಬ್ಬರ ಬಳಕೆ ಈ ಎಲ್ಲವುಗಳ ಕುರಿತು ಮಾಹಿತಿ ಒದಗಿಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಡಾ.ದಾಮೋದರ ರೆಡ್ಡಿ, ವರುಣನ ಅವಕೃಪೆಯಿಂದಾಗಿ ಈ ಬಾರಿ ರೈತರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಹುಣಸೂರು ಸಿಟಿಆರ್‌ಐ ಸಂಶೋಧಿಸಿರುವ ಎಫ್‌ಸಿಎಚ್ 222 ತಳಿಯ ತಂಬಾಕು ಬೀಜಗಳನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಸೂಕ್ತ. ಪೊಟ್ಯಾಷಿಯಂ ರಸಗೊಬ್ಬರವನ್ನು ನಾಟಿ ಮಾಡಿದ 10, 30 ಮತ್ತು 55 ದಿನಗಳಿಗೆ ವಿಂಗಡಿಸಿ ನೀಡುವುದು ಸೂಕ್ತ. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಗೊಬ್ಬರ, ತಿಪ್ಪೆ ಗೊಬ್ಬರ ಬಳಕೆ ಮತ್ತು ಸೆಣಬಿನ ಎಲೆಗಳ ಗೊಬ್ಬರವನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವುದು ಸುಲಭವಾಗಲಿದೆ ಎಂದರು.
ಭೇಟಿ ವೇಳೆ ಕೇಂದ್ರದ ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್, ಹಿರಿಯ ವಿಜ್ಞಾನಿಗಳಾದ ಡಾ.ಎಂ. ಮಹದೇವಸ್ವಾಮಿ, ಡಾ.ಸಿ. ನಂದಾ, ಡಾ.ರಾಜಪ್ಪ, ತಂಬಾಕು ಮಂಡಳಿಯ ಹರಾಜು ಅಧೀಕ್ಷಕ ಧನರಾಜ್, ಸವಿತಾ ಇತರರಿದ್ದರು.