ರಾವಂದೂರು: ತಂಬಾಕಿಗೆ ಪರ್ಯಾಯವಾಗಿ ವಾಣಿಜ್ಯ ಬೆಳೆಯಾದ ರೇಷ್ಮೆ ಬೆಳೆಯನ್ನೂ ಬೆಳೆಯಿರಿ ಎಂದು ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕು ಕೆಲ್ಲೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆ ಮತ್ತು ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಂಬಾಕಿಗಿಂತಲೂ ರೇಷ್ಮೆ ಉತ್ತಮ ವಾಣಿಜ್ಯ ಬೆಳೆಯಾಗಿದೆ ಹಾಗೂ ಹೊಸ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸುವ ಮೂಲಕ ರೇಷ್ಮೆ ಬೆಳೆಯನ್ನು ಬೆಳೆದರೆ ಆರ್ಥಿಕ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿದೆ ಎಂದರು.
ಗ್ರಾಮಗಳ ಸಮಸ್ಯೆಗಳನ್ನು ಅರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವುದರ ಜತೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶಾಶ್ವತ ಪರಿಹಾರ ನೀಡುವ ಮೂಲಕ ಹಂತಹಂತವಾಗಿ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುತ್ತದೆ ಹಾಗೂ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರೇಷ್ಮೆ ಇಲಾಖೆಯ ವಿವಿಧ ಯೊಜನೆಗಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಹಂಡಿತವಳ್ಳಿ ಗ್ರಾಮಪಂಚಾಯಿತಿಯ ಎಲ್ಲ ಗ್ರಾಮಗಳಿಗೂ ಎಲ್ಲ ಅಧಿಕಾರಿಗಳನ್ನು ಜನರ ಬಳಿ ಕೊಂಡೊಯ್ದು ಸ್ಥಳದಲ್ಲೇ ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಜತೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು.
ತಹಸೀಲ್ದಾರ್ ಕುಂಜಿ ಮಹಮ್ಮದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ್‌ಕುಮಾರ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಾದೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಕೆಪಿಸಿಸಿ ಸದಸ್ಯ ನಿತಿನ್‌ವೆಂಕಟೇಶ್, ಗ್ರಾ.ಪಂ.ಅಧ್ಯಕ್ಷ ಸ್ವಾಮಿಗೌಡ, ಆಹಾರ ನಿರೀಕ್ಷಕ ಸಣ್ಣಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್, ಮುಖಂಡರಾದ ನಂದೀಶ್, ಹೊಲದಪ್ಪ, ಕುಮಾರ್‌ವಿಜಯ್, ಮಂಜುನಾಥ್, ಉಪತಹಸೀಲ್ದಾರ್ ಕೆ.ಶುಭಾ, ಪಿಡಿಒ ವಿವೇಕ್, ಜಯರಾಮ್, ರಮೇಶ್, ಕೀರ್ತಿ, ರವಿಕುಮಾರ್, ಕೃಷ್ಣ ಮತ್ತಿತರರು ಹಾಜರಿದ್ದರು.