ಜಿಲ್ಲೆ

ತಂದೆ- ತಾಯಿಯನ್ನು ಹೊರಹಾಕಬೇಡಿ: ನ್ಯಾ. ಇನವಳ್ಳಿ ಕಿವಿಮಾತು

ಹಾಸನ: ಮಕ್ಕಳಿಗೆ ಸಂಸ್ಕಾರವಿಲ್ಲದ ವಿದ್ಯೆ ನೀಡಿದರೆ ಅದು ಸಮಾಜವನ್ನೇ ಹಾಳು ಮಾಡುತ್ತದೆ. ಹಣದಿಂದ ಮಾತ್ರ ಸುಖ ಸಿಗುತ್ತದೆ ಎನ್ನುವುದು ತಪ್ಪು. ಮನಸ್ಸಿನಲ್ಲಿ ಶಾಂತಿ ಇದ್ದರೆ ಮಾತ್ರ ಜೀವನ ಆನಂದಮಯವಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಟಿ.ಎನ್. ಇನವಳ್ಳಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಬೈಪಾಸ್ ರಸ್ತೆ, ಗವೇನಹಳ್ಳಿ ಬಳಿ ಇರುವ ಶಿಶುಕೇಂದ್ರ, ಕಾಮಧೇನು ಸಹಕಾರಿ ವಿದ್ಯಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ವಯೋವೃದ್ಧರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನ್ಯಾಯಾಧೀಶರು, ವ್ಯವಸ್ಥೆಗಳಿಗಿಂತ ಮನಸ್ಸಿನ ಸ್ಥಿತಿ ಸರಿಯಾಗಿರಬೇಕು. ನಾವುಗಳು ಎಲ್ಲವನ್ನು ಮಾಡುವುದು ಜೀವನದ ಸುಖಕ್ಕಾಗಿ, ಅದು ಪ್ರಾರಂಭವಾಗುವುದು ವಿದ್ಯೆಯಿಂದ. ಯಾವುದೇ ಕೆಲಸವನ್ನು ಫಲ ಇಲ್ಲದೇ ಯಾರು ಮಾಡುವುದಿಲ್ಲ. ಕೆಲಸ ಮಾಡುವಾಗ ಫಲದ ನಿರೀಕ್ಷೆ ಬಿಡಬೇಕು. ಏನಾದರೂ ನಿರೀಕ್ಷೆ ಮಾಡಿದಾಗಲೇ ಭವಿಷ್ಯ ಹಾಳಾಗುವುದು ಎಂದು ಕಿವಿ ಮಾತು ಹೇಳಿದರು.

ಇಂದಿನ ಮಕ್ಕಳೆಂದರೆ ಮುಂದಿನ ಜನಾಂಗವಾಗಿದ್ದು, ಅನೇಕರು ಹೇಳುವಂತೆ ಕಾಲ ಎಂದಿಗೂ ಬದಲಾಗಿಲ್ಲ. ಆದರೆ ನಾವುಗಳು ಬದಲಾಗಿದ್ದೇವೆ. ಮೊದಲು ನಾವುಗಳು ಸರಿಯಾಗಬೇಕು. ಕಷ್ಟದ ಅನುಭವ ಇದ್ದರೆ ಮಾತ್ರ ಸುಖ ಏನೆಂಬುದು ಅರ್ಥವಾಗುತ್ತದೆ. ಅನುಭವಕ್ಕಿಂತ ಮತ್ತೊಂದು ಶಿಕ್ಷಣ ಇಲ್ಲ. ಜೀವನ ಎಂದರೆ ಸಾಗರ. ಅದರಲ್ಲಿ ಈಜಿ ಮುಂದೆ ಸಾಗಬೇಕು. ಪ್ರಸ್ತುತ ಮಕ್ಕಳಲ್ಲಿ ಸುಖ ಇದೆ. ಆದರೆ ರುಚಿ ಏನೆಂಬುದು ಗೊತ್ತಿರುವುದಿಲ್ಲ ಎಂದರು.

ಕಾನೂನು ಮಾಡಿರುವುದು ತಪ್ಪು ಮಾಡದಂತೆ ತಡೆಗಟ್ಟಲು. ಹೆತ್ತ ತಂದೆ ತಾಯಿಯನ್ನು ಮಕ್ಕಳು ಹೊರ ಹಾಕದೆ ಸಾಕಬೇಕು. ಜೀವನದಲ್ಲಿ ಒಟ್ಟಾಗಿ ಚನ್ನಾಗಿ ಬಾಳಿ ಬದುಕಬೇಕು ಎಂಬುದು ಕಾನೂನಿನ ಉದ್ದೇಶವಾಗಿದೆ. ಸುಖ ಮತ್ತು ಸಂತೋಷಗಳು ಹೊರಗಿನಿಂದ ಕಾಣಿಸುವುದಲ್ಲ. ಮನಸ್ಸಿನಿಂದ ಬರಬೇಕು. ಹಣ ಇದ್ದರೆ ಸುಖ ಇರುತ್ತದೆ ಎಂದು ಬಹಳಷ್ಟು ಮಂದಿ ತಿಳಿದುಕೊಂಡಿದ್ದಾರೆ. ಆದರೆ ಅದು ತಪ್ಪು. ಮನಸ್ಸು ಶಾಂತವಾಗಿದ್ದರೆ ನೆಮ್ಮದಿ ಲಭಿಸುತ್ತದೆ. ನಮ್ಮ ಜೀವನ ಉತ್ತಮವಾಗಿರುತ್ತದೆ. ಸಂಸ್ಕಾರಯುತ ವಿದ್ಯೆ ಇದನ್ನು ಕಲಿಸಿಕೊಡುತ್ತದೆ. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದಲ್ಲದೇ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಮಾತನಾಡಿ, ಸಾರ್ವಜನಿಕ ಕಚೇರಿ ಇರಬಹುದು, ವೃದ್ಧರ ಪಿಂಚಣಿ ವಿಚಾರ ಇರಬಹುದು. ವೈಯಕ್ತಿಕ ಕಾರಣಗಳಿಗೆ ಏನಾದರೂ ಸಮಸ್ಯೆಗಳು ಇದ್ದರೆ, ಇಲ್ಲವೇ ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಕೂಡ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ತಿಳಿಸಿದರೆ ನಾವು ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿ, ತಮ್ಮ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ಕೆಲಸ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಕಾಮಧೇನು ವೃದ್ಧಾಶ್ರಮದ ಅಧ್ಯಕ್ಷರಾದ ಎಂ. ಮಾಧವ ಶೆಣೈ, ನಿರ್ದೇಶಕರಾದ ಎಚ್.ಚಿ. ಆನಂದ್, ಪಿ. ಜಯರಾಂ, ಎನ್.ಎಸ್. ಕೃಷ್ಣಾಯ್ಯಂಗಾರ್, ಗೌರವ ನಿರ್ದೇಶಕ ಎಚ್. ಪರಮೇಶ್, ಚಂದ್ರೇಗೌಡ, ಅಮೃತನಾಥ್ ಇತರರು ಉಪಸ್ಥಿತರಿದ್ದರು.

---

ಫೋಟೋ ಶೀರ್ಷಿಕೆ

09 ಎಚ್‌ಎಸ್‌ಎನ್ 03

ನಗರದ ಹೊರವಲಯದ ಬೈಪಾಸ್ ರಸ್ತೆ, ಗವೇನಹಳ್ಳಿ ಬಳಿ ಇರುವ ಶಿಶುಕೇಂದ್ರ, ಕಾಮಧೇನು ಸಹಕಾರಿ ವಿದ್ಯಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ವಯೋವೃದ್ಧರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಧೀಶರಾದ ಟಿ.ಎನ್. ಇನವಳ್ಳಿ ಉದ್ಘಾಟಿಸಿದರು. ಈ ವೇಳೆ ನ್ಯಾ. ಬಿ.ಕೆ. ರವಿಕಾಂತ್, ಎಂ. ಮಾಧವ ಶೆಣೈ, ಎಚ್.ಚಿ. ಆನಂದ್, ಪಿ. ಜಯರಾಂ, ಎನ್.ಎಸ್. ಕೃಷ್ಣಾಯ್ಯಂಗಾರ್, ಎಚ್. ಪರಮೇಶ್, ಚಂದ್ರೇಗೌಡ, ಅಮೃತನಾಥ್ ಇತರರು ಉಪಸ್ಥಿತರಿದ್ದರು.