ಹಾಸನ: ತಂದೆ ತಾಯಿ ಹೇಗೆ ಬದುಕುತ್ತಾರೋ ಮಕ್ಕಳು ಸಹ ಅದೇ ಮಾರ್ಗದಲ್ಲಿ ಸಾಗುತ್ತಾರೆ. ಕಂದಮಗಳನ್ನು ಹೇಗೆ ಬೆಳೆಸಬೇಕೆಂಬ ಹೊಣೆಗಾರಿಕೆ ಪಾಲಕರದ್ದೇ ಆಗಿದೆ ಎಂದು ವಿಚಾರವಾದಿ ಶಾಯಿಸ್ತಾ ಸಲಾ ಅವರು ಹೇಳಿದರು.
ನಗರದ ಜವೇನಹಳ್ಳಿ ಕೆರೆ ಸಮೀಪದ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಾಲಯ ಆವರಣದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಜುಕೇಶನ್ ಟ್ರಸ್ಟ್ ವತಿಯಿಂದ ಶನಿವಾರ ಮಕ್ಕಳ ದಿನಾಚರಣೆ ಅಂಗವಾಗಿ ಹಮಿಕೊಂಡಿದ್ದ ತಾಯಿಗೊಂದು ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳ ಮುಂದೆ ಮೊಬೈಲ್ ಬಳಕೆ ಮಾಡಬಾರದು. ಮಗು ಮನೆಯಲ್ಲಿ ಟಿವಿ ನೋಡಲು ಬಯಸುತ್ತದೆ. ವಿದ್ಯಾಭ್ಯಾಸ ಹಾಗು ಊಟ ಮಾಡುವುದಿಲ್ಲ. ಹಿರಿಯರಿಗೆ ಗೌರವ ಕೊಡುವುದಿಲ್ಲ. ನಾವು ಅಂದುಕೊಂಡಂತೆ ಬೆಳೆಯುತ್ತಿಲ್ಲ ಎಂದು ಸಾಲು ಸಾಲು ಆರೋಪ ಮಾಡುವ ಬದಲು ನಾವು ಹೇಗಿದ್ದೇವೆ ಎಂಬುದನ್ನು ಅರಿಯಬೇಕು. ತಂದೆ ಹಾಗು ತಾಯಿಯನ್ನು ಮಕ್ಕಳು ಅನುಸರಿಸುತ್ತಾರೆ. ಆದ್ದರಿಂದ ಪಾಲಕರು ಸರಿಯಾದ ಮಾರ್ಗದಲ್ಲಿ ಸಾಗಬೇಕು ಎಂದರು.
ಸಮಾಜಕ್ಕೆ ಉತ್ತಮ ಪ್ರಜೆ ಸೃಷಿಯಾಗಲಿ ಎಂಬ ಉದ್ದೇಶದಿಂದ ತಾಯಿ ನೂರಾರು ಸಮಸ್ಯೆ ಎದುರಿಸುತ್ತಾಳೆ. ಒಂಬತ್ತು ತಿಂಗಳು ಆಕೆ ಅನುಭವಿಸುವ ಕಷ್ಟ ಹೇಳತೀರದಾಗಿರುತ್ತದೆ. ಆದ್ದರಿಂದ ಅಂದುಕೊಂಡದ್ದು ಈಡೇರಬೇಕೆಂದರೆ ಮಕ್ಕಳ ಪ್ರೌಢಾವಸ್ಥೆ ವರೆಗೆ ಎಚ್ಚರಿಕೆಯಿಂದ ಇರಬೇಕೆಂದರು.
ಮನೆಯೇ ಮೊದಲ ಪಾಠ ಶಾಲೆ-ತಾಯಿಯೇ ಮೊದಲ ಗುರು ಎಂಬುದನ್ನು ಅರಿಯಬೇಕು. ದೊಡ್ಡವರು ಏನು ಮಾತನಾಡುತ್ತಾರೋ ಅದನ್ನೇ ಕಂದಮಗಳು ಗ್ರಹಿಸುತ್ತವೆ. ತಾಯಿ ಶಿಲ್ಪಿ ಆಗಿದ್ದು, ಹೇಗೆ ಕೆತ್ತನೆ ಆಗುತ್ತದೆಯೋ ಹಾಗೆ ಮೂರ್ತಿ ತಯಾರಾಗುತ್ತದೆಂದರು.
ನಗರಸಭೆ ಸದಸ್ಯೆಅಶ್ವಿನಿ ಮಹೇಶ್, ಭಾರತೀ ಜಗದೀಶ್, ಶೋಭಾ ಸುರೇಶ್, ಆಶಾ ಪ್ರಭಾಕರ್, ಶಾಲಿನಿ ವಿನೋದ್ ಇತರರು ಇದ್ದರು.