ಬಾಗಲಕೋಟೆ: ವೈದ್ಯಕೀಯ ಅಧ್ಯಯನದಲ್ಲಿ ಅನಾಟಮಿ ಒಂದು ಮೂಲ ಮತ್ತು ಮಹತ್ವದ ವಿಷಯ. ಈಗ ತಂತ್ರಜ್ಞಾನದ ಪರಿಣಾಮ ಮಾನವ ದೇಹವನ್ನು ತುಂಬ ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿದೆ ಎಂದು ಕಲಬುರಗಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಕೆ.ಆರ್ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೆಡಿಯೊಅನಾಟ-೨೦೨೪ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
. ತರಗತಿಯಲ್ಲಿ ಕಲಿಯುವುದರ ಜೊತೆಗೆ ಇಂತಹ ಸಮ್ಮೇಳನಗಳಲ್ಲಿ ಭಾಗವಿಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗುತ್ತದೆ. ಸಮ್ಮೇಳನ ಕಲಿಕೆಗೆ ಒಂದು ವೇದಿಕೆಯಾಗಿದೆ. ಈ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಅತ್ಯುತ್ತಮ ವಾತಾವರಣ ಸೃಷ್ಟಿಸಲಾಗಿದೆ. ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗಾಗಿ ಸಮ್ಮೇಳನ ಆಯೋಜಿಸಿರುವುದು ಮೆಚ್ಚುವಂತಹದ್ದು. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ವೈದ್ಯಕೀಯ ವಿಜ್ಞಾನದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಸಮ್ಮೇಳನ ಇದಾಗಿದೆ. ಸಮ್ಮೇಳನದಲ್ಲಿ ಹೊಸ ವಿಷಯಗಳ ಕುರಿತು ಚರ್ಚೆ ಹಾಗೂ ಸಂವಾದಗಳು ನಡೆಯಲಿವೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಹೊಸ ಕಲಿಕೆಗೆ ಅವಕಾಶ ದೊರೆಯಲಿದೆ. ಎರಡು ದಶಕಗಳ ಹಿಂದೆ ಬಾಗಲಕೋಟೆಯಂತಹ ಸಣ್ಣ ನಗರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸಲು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಶ್ರಮ ಆದರಣೀಯ ಎಂದು ಹೇಳಿದರು.
ಬಿವಿವಿ ಸಂಘದ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಡಾ.ಸಂತೋಷ ಭೋಸ್ಲೆ, ಡಾ.ಸಂಜೀವ ಕೊಳಗಿ, ಡಾ.ರುದ್ರೇಶ ಹಾಲವಾರ, ಡಾ.ಅಶ್ವಿನಿ ಮುತಾಲಿಕ ಮತ್ತು ಡಾ.ಲೋಹಿತ ಶಹ ಉಪಸ್ಥಿತರಿದ್ದರು. ಡಾ.ಸಂಜೀವ ಕೊಳಗಿ ಸ್ವಾಗತಿಸಿದರು. ಡಾ.ಮಂಜುಳಾ ಪಾಟೀಲ ಪರಿಚಯಿಸಿದರು. ಡಾ.ಅಶ್ವಿನಿ ಮುತಾಲಿಕ ವಂದಿಸಿದರು.