ಜಿಲ್ಲೆ

ತಂತ್ರಜ್ಞಾನದ ಮೊರೆ ಹೋದ ಪೊಲೀಸರು

ಭಟ್ಕಳ: ಪಟ್ಟಣದಲ್ಲಿ ಪರಸ್ಪರ ಅಂತರ, ಲಾಕ್​ಡೌನ್ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ಮತ್ತೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ. ಸೋಮವಾರದಿಂದ ಡ್ರೋನ್ ಮೂಲಕ ಜನರ ಮೇಲೆ ಕಣ್ಣಿಟ್ಟಿದೆ.

ಸ್ಥಳೀಯ ಜಾಲಿ ಪಟ್ಟಣ ಪಂಚಾಯಿತಿ, ಭಟ್ಕಳ ಪುರಸಭೆ ಮತ್ತು ಹೆಬಳೆ ಪಂಚಾಯಿತಿಯಲ್ಲಿ ಬೆಳಗ್ಗೆ 6 ರಿಂದ 2ರವರೆಗೆ ಮಾತ್ರ ವಿನಾಯಿತಿ ನೀಡಿದ್ದು, ನಂತರ ಲಾಕ್​ಡೌನ್ ಮಾಡಲಾಗಿದೆ. ಆದರೂ ಜನರ ಓಡಾಟ ಕಡಿಮೆಯಾಗಿಲ್ಲ. ಪ್ರತಿ ಬಾರಿಯೂ ಪೊಲೀಸರೆ ತೆರಳಿ ನಿಯಂತ್ರಿಸಬೇಕಾದ ಸ್ಥಿತಿ ಇದೆ.

ಅಲ್ಲದೆ, ಪೊಲೀಸರಲ್ಲೂ ಕರೊನಾ ಸೋಂಕು ಪತ್ತೆಯಾಗುತ್ತಿದ್ದು, ಗ್ರಾಮೀಣ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿರುವವರ ನಿಯಂತ್ರಣ, ಪರಸ್ಪರ ಅಂತರ ಕಾಯ್ದುಕೊಳ್ಳದ ಸ್ಥಳಗಳನ್ನು ಸುಲಭವಾಗಿ ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಭಟ್ಕಳ ಪೊಲೀಸರು ಮತ್ತೆ ಡ್ರೋನ್ ಮೊರೆ ಹೋಗಿದ್ದಾರೆ. ಶಂಸುದ್ದೀನ್ ಸರ್ಕಲ್​ನಲ್ಲಿ ಸಿಪಿಐ ದಿವಾಕರ ಡ್ರೋನ್ ಕಾರ್ಯನಿರ್ವಹಣೆಯನ್ನು ಸೋಮವಾರ ವೀಕ್ಷಿಸಿದರು.

ನಂತರ ಪಟ್ಟಣದ ನ್ಯಾಯಾಲಯದ ಬಳಿ, ರಂಗಿನಕಟ್ಟೆ, ಮಾರಿಕಟ್ಟೆ, ರಥಬೀದಿ, ನವಾಯತ್ ಕಾಲನಿ, ಸುಲ್ತಾನ್ ಸ್ಟ್ರೀಟ್, ಚೌಕ ಬಜಾರ ಸೇರಿ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲೂ ಡ್ರೋನ್ ಕಾರ್ಯಾಚರಣೆ ನಡೆಸಿದೆ. ಅಲ್ಲದೆ, ಪ್ರತಿದಿನ ಮಧ್ಯಾಹ್ನ 2 ಗಂಟೆಯ ಬಳಿಕ ಯಾವುದೇ ಸಂದರ್ಭದಲ್ಲೂ ಡ್ರೋನ್ ಹಾರಾಟ ನಡೆಸಿ ಜನರ ಚಲನವಲನಗಳಲ್ಲಿ ನಿಗಾ ಇಡಲಾಗುವುದು ಎಂದು ಸಿಪಿಐ ದಿವಾಕರ ಪತ್ರಿಕೆಗೆ ತಿಳಿಸಿದ್ದಾರೆ. ಕುಂದಾಪುರ ಮೂಲದ ಡಿಜೆ ರಂಜಿತ, ಶ್ರೀವರ್ಷಾ ಅವರು ಡ್ರೋನ್ ಹಾರಾಟ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದರು.