ಚಿತ್ರದುರ್ಗ: ನಾಲ್ಕು ವರ್ಷದ ಶ್ರಮ ನಿಮ್ಮ ಮುಂದಿನ ಬದುಕಿಗೆ ದಾರಿ ದೀಪವಾಗುತ್ತದೆ ಎಂದು ಗುಬ್ಬಿ ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್.ಸುರೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಫೂರ್ತಿ-2025’ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ 4 ವರ್ಷದ ಶ್ರಮದೊಂದಿಗೆ ಬದಲಾಗುತ್ತಿರುವ ತಂತ್ರಜ್ಞಾನದ ತಿಳಿವಳಿಕೆಯೊಂದಿಗೆ ಸಾಗಬೇಕು. ಕೃತಕ ಬುದ್ಧಿಮತ್ತೆ ಮಾನವ ಸಂಪನ್ಮೂಲ ಕಡಿಮೆ ಮಾಡಿ ತಂತ್ರಜ್ಞಾನವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ. ನಮ್ಮ ನಿಲುವು ನಮ್ಮ ಬದುಕನ್ನು ನಿರ್ಧರಿಸುತ್ತದೆ ಎಂದರು.
ಗುಬ್ಬಿ ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಚಾರ‌್ಯೆ ಡಾ.ಸಿ.ಪಿ.ಶಾಂತಲಾ ಮಾತನಾಡಿ, ಮುರುಘಾಮಠದ ಸಾತ್ವಿಕ ವಾತಾವರಣ ಆಧ್ಯಾತ್ಮಿಕ ಚಿಂತನೆಗಳಿಗೆ ಚೈತನ್ಯ ನೀಡುತ್ತದೆ. ವಚನಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತವೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಮಾತನಾಡಿದರು. ಡಾ.ಎಸ್.ಪಿ.ಶಿವಕುಮಾರ್, ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಕೆ.ಬಿ.ಸಿದ್ದೇಶ್, ಡಾ.ಕೆ.ಆರ್.ಕೃಷ್ಣಾರೆಡ್ಡಿ, ಡಾ.ಜೆ.ಎಂ.ಶ್ರೀಶೈಲಾ, ಡಾ.ಎಚ್.ಜೆ.ಲೋಕೇಶ್, ಡಾ.ಇ.ನಿರಂಜನ್, ಪ್ರೊ.ಎ.ಪಿ.ಶಶಿಧರ್, ಡಾ.ಕೆ.ಕುಮಾರಸ್ವಾಮಿ, ಪ್ರೊ.ಸುಷ್ಮ್ಮಿತಾ ದೇಬ್ ಮತ್ತಿತರರು ಇದ್ದರು.
ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಕ್ರೀಡೆಗಳ ವಿಜೇತರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ವಿ-ಫೋರ್ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಣತಿ ಪ್ರಾರ್ಥಿಸಿದರು. ಪ್ರೊ.ಟಿ.ತನುಜಾ ಸ್ವಾಗತಿಸಿ, ಪ್ರೊ.ಆರ್.ಎಸ್.ಜಯದೇವಪ್ಪ ವಂದಿಸಿದರು. ಮೊಹಮ್ಮದ್ ಬಿಲಾಲ್ ಮತ್ತು ಕೇಸರ್ ಮಲನ್ ನಿರೂಪಿಸಿದರು.
----