ಬಸವಕಲ್ಯಾಣ: ತಂತ್ರಜ್ಞಾನಕ್ಕಿಂತ ಆಲೋಚನೆಗಳು ಮುಖ್ಯ. ಎಐ ಹಾಗೂ ಆಧುನಿಕ ತಂತ್ರಜ್ಞಾನವನ್ನು ಎದುರಿಸುವ ಸವಾಲು ಎಂಥದ್ದು ಎಂಬುದನ್ನು ವಿವೇಚಿಸಬೇಕಾದ ಅಗತ್ಯ ಇಂದಿನ ಅಧ್ಯಾಪಕರ ಮೇಲಿದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಕರ್ನಾಟಕ ಪಠ್ಯಕ್ರಮ ರಚನಾ ಸಮಿತಿ ಸದಸ್ಯ ಡಾ.ಕಿರಣ್ ಗಾಜನೂರು ಅಭಿಪ್ರಾಯಪಟ್ಟರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕತೆ ಎಷ್ಟೇ ಮುಂದುವರೆದರೂ ನಾವು ಪಡೆದ ತಾಂತ್ರಿಕತೆಯ ಸದ್ಬಳಕೆ ಹೇಗೆ ಮಾಡಿಕೊಳ್ಳಬೇಕು ಎಂಬ ಅರಿವು ಮೂಡಿಸಲು ಶಿಕ್ಷಕರ ಅಗತ್ಯವಿದೆ ಎಂದು ಹೇಳಿದರು.
ಪ್ರಶ್ನಿಸುವ, ವೈಜ್ಞಾನಿಕ ಮನೋಭಾವ, ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸುವ ಉದ್ದೇಶ ಶಿಕ್ಷಣದ್ದಾಗಿದೆ. ಸ್ವಾತಂತ್ರ್ಯಅನುಭವಿಸುವ ವಾತಾವರಣ ತರಗತಿಯಿಂದಲೇ ಸಾಧ್ಯವಾಗಬೇಕು. ಪ್ರಜಾಸತ್ತಾತ್ಮಕ ವಿವೇಚನೆ, ಚಿಂತನೆಗಳು ಸೃಷ್ಟಿಸುವ ಕೆಲಸ ಅಧ್ಯಾಪಕರಿಂದ ಸಾಧ್ಯವಾಗಬೇಕು ಎಂದರು.
ಕಲಬುರ್ಗಿಯ ವಿಭಾಗೀಯ ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ವ್ಯಕ್ತಿ, ಸಮಾಜ ಕಟ್ಟುವ ಕೆಲಸ ಶಿಕ್ಷಣದಿಂದ ಸಾಧ್ಯವಿದೆ. ಗುರು ಮುಟ್ಟಿ ಗುರುವಾಗು, ಜ್ಯೋತಿ ಮುಟ್ಟಿ ಜ್ಯೋತಿಯಾಗು ಎಂಬ ಹೊಸ ಭಾಷೆ ನೀಡಿದ್ದು ಕಲ್ಯಾಣದ ಶರಣರ ಚಳುವಳಿ ಎಂದು ಹೇಳಿದರು.
ವಿಶ್ವಸ್ಥ ಸಮಿತಿ ಸದಸ್ಯ ಸೋಮಶೇಖರಯ್ಯ ವಸ್ತçದ ಮಾತನಾಡಿ, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಅದರ್ಶ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜದ ಏಳಿಗೆಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಶ್ರಮ ದೊಡ್ಡದು ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಮಲ್ಲಯ್ಯ ಸ್ವಾಮಿ ಹಿರೇಮಠ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಭಾವಿ, ಶ್ರೀಕಾಂತ ಬಡದಾಳೆ, ಜಗನ್ನಾಥ ಖೂಬಾ, ಅನಿಲಕುಮಾರ ರಗಟೆ, ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್. ಭುರಾಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶಟ್ಟೆ, ಮಲ್ಲಿಕಾರ್ಜುನ ಮಂಠಾಳೆ, ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟೆ, ಶರಣಪ್ಪ ದುರ್ಗೆ, ಅಶೋಕ ಸ್ವಾಮಿ ಇದ್ದರು.
ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರುದ್ರಮಣಿ ಮಠಪತಿ ವಂದಿಸಿದರು. ಡಾ. ಬಸವರಾಜ ಖಂಡಾಳೆ ಹಾಗೂ ಸಂಗೀತಾ ಮಹಾಗಾವೆ ನಿರೂಪಣೆ ಮಾಡಿದರು. ಸಂಸ್ಥೆಯಿಂದ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ನಿರಂತರ ಚಲನಶೀಲವಾಗಿಡುವ ಕೆಲಸ ಶಿಕ್ಷಣದ್ದಾಗಿದೆ. ಭಾರತದಲ್ಲಿ ಆಧ್ಯಾತ್ಮಿಕತೆ ಶಿಕ್ಷಣದ ಮೂಲಭೂತ ತಳಹದಿಯಾಗಿದೆ. ವರ್ತಮಾನಕ್ಕೆ ಮತ್ತು ಭವಿಷ್ಯತ್ತಿಗೆ ಅರಿವನ್ನು ಸೃಷ್ಟಿಸುವ ಕೆಲಸ ಶಿಕ್ಷಕನದು. ಅರಿವಿನ ಕ್ರಾಂತಿ ಮಾಡಬೇಕಾದ ವಿದ್ಯಾ ಸಂಸ್ಥೆಗಳು ನೌಕರಿ ಸೃಷ್ಟಿಸುತ್ತಿವೆ. ಅದಕ್ಕಾಗಿ ಪ್ರಮಾಣ ಪತ್ರ ಸೃಷ್ಟಿಸುವಲ್ಲಿ ತೊಡಗಿವೆ. ಸಾಮಾಜಿಕ ಪ್ರಜ್ಞೆ, ಸಾಂಸ್ಕೃತಿಕ ಅರಿವು ಮೂಡಿಸುವ ಬಹುದೊಡ್ಡ ಜವಾಬ್ದಾರಿ ಅಧ್ಯಾಪಕರದ್ದಾಗಿದೆ.
| ಡಾ. ಕಿರಣ್ ಗಾಜನೂರು ಪ್ರಾಧ್ಯಾಪಕ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ