ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಅಖಿಲ ಭಾರತ ಅಗ್ರಿ ಸ್ಟಾರ್ಟ್ ಅಪ್ ಸಮಾವೇಶವನ್ನು ಭಾರತೀಯ ಅನುಸಂಧಾನ ಕೃಷಿ ಪರಿಷತ್ ಉಪಮಹಾನಿರ್ದೇಶಕ ಡಾ.ಆರ್. ಸಿ. ಅಗರ್‌ವಾಲ್ ಉದ್ಘಾಟಿಸಿದರು. ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಇದ್ದರು. 
ಜಿಲ್ಲೆ

ತಂತ್ರಜ್ಞಾನ ಬಳಕೆ ಅಗತ್ಯ

ಬಾಗಲಕೋಟೆ: ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ಆವಿಷ್ಕಾರಗಳು ನಡೆಯುತ್ತಿವೆ. ಅವುಗಳು ವಾಸ್ತಪ ರೂಪದಲ್ಲಿ ಅನ್ನದಾತರು ಅಳವಡಿಸಿಕೊಳ್ಳುವಂತೆ ಮಾಡಬೇಕು. ಇಂದು ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ ಎಂದು ಭಾರತೀಯ ಅನುಸಂಧಾನ ಕೃಷಿ ಪರಿಷತ್ ಉಪಮಹಾನಿರ್ದೇಶಕ ಡಾ.ಆರ್. ಸಿ. ಅಗರ್‌ವಾಲ್ ಹೇಳಿದರು.


ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಅಖಿಲ ಭಾರತ ಅಗ್ರಿ ಸ್ಟಾರ್ಟ್ ಅಪ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.


ಹವಾಮಾನ ವೈಪರಿತ್ಯ, ಕೃಷಿ ಭೂಮಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದ ದೇಶ ಆಹಾರ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದಿಂದ ಜನರ ಜೀವನ ಬದಲಾಗಲಿದೆ. ಹೊಸ ಬಗೆಯ ಆಲೋಚನೆಗಳನ್ನು ಮಾಡಬೇಕು. ಅಗ್ರಿ ಸ್ಟಾರ್ಟ್ ಅಪ್‌ಗಳಲ್ಲಿ ೧.೨ ಬಿಲಿಯನ್ ಹೂಡಿಕೆಯಾಗಿದೆ. ಶೇ ೩೦ರಷ್ಟು ಆಹಾರಧಾನ್ಯ ವ್ಯರ್ಥ ಆಗುತ್ತಿದೆ. ಇದನ್ನು ತಡೆಯುವಂತಹ ಸ್ಟಾರ್ಟ್ ಅಪ್‌ಗಳು ಬರಬೇಕಿದೆ ಎಂದರು.
ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ. ಪದವಿ ಪಠ್ಯಕ್ರಮ ಬದಲಾವಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಅಂಕ ಗಳಿಸುವ ಯಂತ್ರಗಳನ್ನು ಮಾಡಬೇಡಿ. ಕೌಶಲ್ಯ ಬೆಳೆಸಬೇಕು. ಪರಿಷತ್‌ನ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯಡಿ ಉದ್ಯಮಶೀಲ ಸಾಮರ್ಥ್ಯ ಮತ್ತು ಉದ್ಯೋಗಾವಕಾಶ ಹೆಚ್ಚಿಸಲು ೧,೧೦೦ ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.೮೦೦ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಬಂದಿದ್ದಾರೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.


ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಆಧಾರಿತ ಉದ್ಯಮ ಪ್ರಾರಂಭವಾದಲ್ಲಿ ರೈತರ ಆರ್ಥಿಕ ಮಟ್ಟ ಹೆಚ್ಚಳವಾಗುವದರ ಜೊತೆಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ. ದೇಶದ ಪ್ರಧಾನ ಮಂತ್ರಿಗಳು ಸಮ್ಮಾನ ಯೋಜನೆಯಡಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿಯಲ್ಲಿ ವೈಜ್ಞಾನಿಕ, ಲಾಭದಾಯಕ ಹಾಗೂ ಆದಾಯ ಹೆಚ್ಚಳವಾಗುವಂತಹ ಗುಣಮಟ್ಟದ ಸಂಶೋಧನೆಗಳು ಆಗಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಥಿಕ ಮಟ್ಟದ ಹೆಚ್ಚಿಸುವ ಕಾರ್ಯವಾಗಬೇಕು. ಮಣ್ಣಿನ ಗುಣಮಟ್ಟದ ಆಧಾರಿತ ವ್ಯವಸಾಯ, ಹನಿ ನೀರಾವರಿ, ನೀರಿನ ಸದ್ಬಳಕೆ, ನ್ಯಾಯೋ ಯೂರಿಯಾ ಬಳಕೆ, ರಸ ನೀರಾವರಿಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.


ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಉತ್ತಮ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದೇಶದ ಪ್ರಧಾನ ಮಂತ್ರಿಗಳು ಕರೆ ನೀಡಿದಂತೆ ಅಗ್ರಿ ಸ್ಟಾರ್ಟಅಪ್‌ನಲ್ಲಿ ವಿಶಾಲವಾದ ಅವಕಾಶ ನೀಡಿದ್ದು, ಅದರ ಸದುಪಯೋಗವಾಗಬೇಕು. ವಿಜ್ಞಾನದ ಹೊಸ ಹೊಸ ಅವಿಷ್ಕಾರಗಳು ದೇಶದ ಜನರಿಗೆ ತಲುಪಿಸುವ ಕೆಲಸವಾಗಬೇಕು. ರೈತ ದೇಶದ ಬೆನ್ನೆಲುಬು ಆಗಿದ್ದು, ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಆಧಾರಿತ ಉದ್ಯಮಿಗಳು ಹೊರತಂದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ತೋವಿವಿಯ ಪ್ರಧಾನ ಸಂಶೋಧಕ ಡಾ.ಆರ್.ಕೆ.ಮೇಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ಶಿವಮೊಗ್ಗದ ಉಪ ಕುಲಪತಿ ಡಾ.ಆರ್.ಸಿ.ಜಗದೀಶ, ಐಸಿಎಆರ್ ಬೋರ್ಡನ ಸದಸ್ಯ ಡಾ.ಎಂ.ಶಿವಮೂರ್ತಿ, ತೋವಿವಿಯ ರಿಜಿಸ್ಟರ ಡಾ.ಟಿ.ಬಿ.ಅಲ್ಲೋಳ್ಳಿ, ಸಹ ಪ್ರಧಾನ ಸಂಶೋಧಕ ಡಾ.ಐ.ಬಿ.ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.