ಭತ್ತದ ಗದ್ದೆಯಲ್ಲಿ ವಾಲಿರುವ ವಿದ್ಯುತ್ ಕಂಬ. 
ಜಿಲ್ಲೆ

ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿಗಳು!

ಸಕಲೇಶಪುರ: ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಹಳ್ಳಿ, ದಿನಹಳ್ಳಿ, ಹರಗರಹಳ್ಳಿ, ಕೆ.ಮಂಚಹಳ್ಳಿ, ಬೊಮ್ಮನಕೆರೆ ಗ್ರಾಮಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿದ್ದು, ಸ್ಥಳೀಯ ಜನರು ಜೀವಭಯದಲ್ಲಿ ಬದುಕಬೇಕಾಗಿದೆ ಎಂದು ಬ್ಯಾಕರವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ರೋಷನ್ ಅಳಲು ತೋಡಿಕೊಂಡಿದ್ದಾರೆ.

1971-72ನೇ ಸಾಲಿನಲ್ಲಿ ಬ್ಯಾಕರವಳ್ಳಿ ಗ್ರಾ.ಪಂ. ವ್ಯಾಪ್ತಿಯ ಐಹಳ್ಳಿ ಗ್ರಾಮದಿಂದ ದಿನಹಳ್ಳಿ, ಹರಗರಹಳ್ಳಿ, ಕೆ.ಮಂಚಹಳ್ಳಿ,ಬೊಮ್ಮನಕೆರೆ ಗ್ರಾಮಗಳಿಗೆ ಪ್ರಾಥಮಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಈ ವೇಳೆ ವಿದ್ಯುತ್ ಮಾರ್ಗವನ್ನು ಕೃಷಿ ಜಮೀನಿನ ಮೇಲೆ ಕೊಂಡೊಯ್ಯಲಾಗಿದೆ. ಅಂದಿನಿಂದ ಈವರೆಗೆ ವಿದ್ಯುತ್ ತಂತಿ ಬದಲಾವಣೆ ಮಾಡದ ಕಾರಣ ತಂತಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ತುಂಡಾಗಿ ಬೀಳುತ್ತಿವೆ. ಇತ್ತೀಚಿಗೆ ಬೊಮ್ಮನಕರೆ ಗ್ರಾಮದಲ್ಲಿ ದನ ಕಾಯುತ್ತಿದ್ದ ರಾಜಶೇಖರ್ ಅವರ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಅವರು ಸಾವಿಗೀಡಾಗಿದ್ದರು. ಇದಲ್ಲದೆ ಹಲವು ಬಾರಿ ವಿದ್ಯುತ್ ತಂತಿಗಳು ತುಂಡಾಗಿ ಕೃಷಿ ಜಮೀನಿನಲ್ಲಿ ಬಿದ್ದ ಹಲವು ನಿದರ್ಶನಗಳಿವೆ. ಇದರಿಂದಾಗಿ ಜಮೀನಿನ ಕೆಲಸಕ್ಕೆ ಕಾರ್ಮಿಕರ ಬರಲು ಹಿಂಜರಿಯುತ್ತಿದ್ದಾರೆ. ಸಾವು ಸಂಭವಿಸಿದ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಸೆಸ್ಕ್ ಹಿರಿಯ ಅಧಿಕಾರಿ ಶೀಘ್ರವೇ ಮಾರ್ಗ ಹಾಗೂ ತಂತಿಗಳನ್ನು ಬದಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇವರ ಭರವಸೆ ಹುಸಿಯಾಗಿದೆ. ಆದ್ದರಿಂದ, ಅನಾಹುತ ಸಂಭವಿಸುವ ಮುನ್ನ ತಂತಿ ಹಾಗೂ ಮಾರ್ಗ ಬದಲಿಸಿಕೊಡಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.