ಜಿಲ್ಲೆ

ತಾ.ಪಂ, ಜಿ.ಪಂ. ಚುನಾವಣೆ ಗೆಲುವಿಗೆ ಶ್ರಮವಹಿಸಬೇಕು

ಸೋಮವಾರಪೇಟೆ: ಮುಂದಿನ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಕಾರ್ಯಕರ್ತರಾದ ನಾವೆಲ್ಲರೂ ಶ್ರಮ ಹಾಕಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಶುಕ್ರವಾರ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈಗಾಗಲೇ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದಲ್ಲಿ ಹಣ ಇಲ್ಲ, ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂಬ ವಿರೋಧ ಪಕ್ಷದವರ ಹೇಳಿಕೆಗೆ ನಾವು ಕೆಲಸ ಮಾಡುವ ಮೂಲಕ ಸರ್ಕಾರದಿಂದ ಕ್ಷೇತ್ರಕ್ಕೆ ಹಣ ಬರುತ್ತಿರುವುದನ್ನು ತೋರಿಸಬೇಕಿದೆ ಎಂದು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡುವ ಮೂಲಕ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದೀರಿ. ಮುಂದೆ ಅದೇ ಮಾದರಿಯಲ್ಲಿ ಸಂಘಟನೆ ಮಾಡಬೇಕು. ವಿರೋಧ ಪಕ್ಷಗಳ ಬೂಟಾಟಿಕೆ ಮತದಾರರಿಗೆ ತಿಳಿದಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಇಬ್ಬರೂ ಶಾಸಕರು ಅಭಿವೃದ್ಧಿಗಾಗಿ 200 ಕೋಟಿ ಅನುದಾನವನ್ನು ತರುವ ಮೂಲಕ ಜಿಲ್ಲೆ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಸರ್ಕಾರ ವಿವಿಧ ಸಂಸ್ಥೆಗಳಲ್ಲಿ ನಾಮ ನಿರ್ದೇಶನ ಮಾಡಿದ್ದು, ಅವರು ಸಾರ್ವಜನಿಕರ ಕೆಲಸವನ್ನು ಮುಂದೆ ನಿಂತು ಮಾಡಬೇಕು. ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕೆಲಸ ಮಾಡಿದಲ್ಲಿ ಮುಂದೆ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಗಳಿಸಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್. ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಈ. ಜಯೇಂದ್ರ, ಡಿಸಿಸಿ ಸದಸ್ಯ ಜನಾರ್ಧನ್, ಆರೋಗ್ಯ ಸಮಿತಿ ಸದಸ್ಯ ಡಾ. ಉದಯಕುಮಾರ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಾಂತರಾಜ್, ಕೆಡಿಪಿ ಸದಸ್ಯ ಎಚ್.ಆರ್. ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮತ್ತಿತರರು ಇದ್ದರು.