ಬಾಗಲಕೋಟೆ: ತಾಲೂಕಿನ ಭಗವತಿ ಗ್ರಾಮದ ರೈತ ರವಿ ಕಾಖಂಡಕಿ ಅವರ ತೊಗರಿ ಬೆಳೆಗೆ ಈಚೆಗೆ ಕೃಷಿ ಇಲಾಖೆ ಮತ್ತು ಇಸ್ಕೋ ಸಂಸ್ಥೆ ಸಹಯೋಗದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಮಾಡಲಾಯಿತು.
ನ್ಯಾನೋ ಯೂರಿಯಾ ಪ್ರತಿ ಎಕರೆಗೆ ೧೦ ಲೀಟರ್ ಸಿಂಪರಣಾ ದ್ರಾವಣಕ್ಕೆ ೫೦೦ ಮಿಲಿ ನ್ಯಾನೋ ಯೂರಿಯಾ (ಪ್ರತಿ ಎಕರೆಗೆ ಪ್ರತಿಶತ ೨೦ ರಂತೆ) ಬಳಸಿ ಸಿಂಪರಣೆ ಮಾಡಿ ಪ್ರಾತ್ಯಕ್ಷಿಕೆ ನಡೆಸಿ ರೈತರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ದೇಶಕ ಲಕ್ಷ್ಮಣ ಕಳೆನ್ನವರ ಮಾತನಾಡಿ, ರೈತರು ರಸಗೊಬ್ಬರಕ್ಕಾಗಿ ಅಲೆದಾಡದೇ ನ್ಯಾನೋ ಯೂರಿಯಾ ಗೊಬ್ಬರವನ್ನು ಬಳಸಬೇಕು. ಅರ್ಧ ಲೀಟರ್ ನ್ಯಾನೋ ಒಂದು ಚೀಲ ಗೊಬ್ಬರಕ್ಕೆ ಸಮವಾಗಿದೆ. ನ್ಯಾನೋ ಯೂರಿಯಾ ದ್ರಾವಣ ಸಿಂಪಡಿಸುವುದರಿಂದ ಕಡಿಮೆ ಖರ್ಚಿನಲಿ ಅಽಕ ಇಳುವರಿ ಪಡೆಯಬಹುದಾಗಿದೆ ಎಂದು ಹೇಳಿದರು.
ಡ್ರೋನ್ ಮೂಲಕ ನ್ಯಾನೋ ಯೂರಿಯಾ ದ್ರಾವಣ ೧ ಎಕರೆಗೆ ಸಿಂಪರಣೆ ಮಾಡಲು ೮ ರಿಂದ ೧೦ ನಿಮಿಷದ ಬೇಕಾಗುತ್ತದೆ. ನ್ಯಾನೋ ಕಣಗಳು ಅತಿ ಸೂಕ್ಷ್ಮ ವಾಗಿದ್ದು ಅವುಗಳನ್ನು ಸಸ್ಯ ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತವೆ. ಇದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಅಽಕ ಲಾಭ ದೊರೆಯಬಹುದಾಗಿದೆ ಎಂದರು.
ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ, ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಮಾತ್ರ ಸಧ್ಯಕ್ಕೆ ಡ್ರೋನ್ ಮೂಲಕ ಸಿಂಪರಣೆ ಮಾಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಮುತ್ತನಗೌಡ ಗೌಡರ, ರೈತರಾದ ಕಲ್ಲು ಹಳ್ಳೂರ, ಶರಣಪ್ಪ ಗುಳೇದ, ಗ್ರಾಪಂ ಅಧ್ಯಕ್ಷ ಶಿವಪುತ್ರಪ್ಪ ದೊಡಮನಿ, ಶಿವಣ್ಣ ಬಾಳಕ್ಕನವರ, ಪರಶುರಾಮ ಪದರಾ, ಸುರೇಶ ಬಾಳಕ್ಕನವರ, ಮಲ್ಲು ರಕರಡ್ಡಿ, ಡ್ರೋನ್ ಪೈಲಟ್ ಸಂಗಪ್ಪ ಹುರಕಡ್ಲಿ ಉಪಸ್ಥಿತರಿದ್ದರು.