ಅರಸೀಕೆರೆ: ಡ್ರಾಪ್ ಕೊಡುವುದಾಗಿ ಯುವಕನನ್ನು ಕಾರಿನಲ್ಲಿ ಕೂರಿಸಿಕೊಂಡು ಆತನಿಂದ ಹಣ, ಎಟಿಎಂ ಕಾರ್ಡ್ ಕಿತ್ತು ಆರೋಪಿಗಳು ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಎಚ್.ಪಿ.ಶಿವರಾಜ್ ಎಂಬುವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಊರಿನಿಂದ ವಾಪಸ್ ಬೆಂಗಳೂರಿಗೆ ನ.18 ರ ರಾತ್ರಿ 11.30ರಲ್ಲಿ ಕಡೂರು ಚೆಕ್‌ಪೋಸ್ಟ್ ಬಳಿ ಬಸ್‌ಗಾಗಿ ಕಾಯುತ್ತಿದ್ದರು. ಅದೇ ವೇಳೆಗೆ ಬಂದ ಇಂಡಿಕಾ ಕಾರಿನಲ್ಲಿದ್ದವರು ಬೆಂಗಳೂರು ಎಂದು ಕೂಗಿದ್ದಾರೆ. ಕೂಡಲೇ ಶಿವರಾಜ್ ಆ ಕಾರಿಗೆ ಹತ್ತಿದ್ದಾರೆ. ಕಾರಿನಲ್ಲಿ ಚಾಲಕ ಸೇರಿ ಮೂವರಿದ್ದರು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಣಾವರ ವ್ಯಾಪ್ತಿಯಲ್ಲಿ ಕಾರು ನಿಲ್ಲಿಸಿ ಶಿವರಾಜ್ ಮೇಲೆ ಹಲ್ಲೆ ಮಾಡಿ ನಿನ್ನ ಬಳಿ ಇರುವ ಹಣ ಕೊಡು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ.
ನಂತರ ಶಿವರಾಜ್ ಬಳಿಯಿದ್ದ ಲ್ಯಾಪ್‌ಟ್ಯಾಪ್, ಮೊಬೈಲ್, 500 ರೂ.ಹಣ, ಎಟಿಎಂ ಕಾರ್ಡ್, 2 ಕ್ರೆಡಿಟ್ ಕಾರ್ಡ್ ಕಿತ್ತುಕೊಂಡು ಪಾಸ್‌ವರ್ಡ್ ಮತ್ತು ಯುಪಿಐ ಪಾಸ್‌ವರ್ಡ್ ಪಡೆದಿದ್ದಾರೆ. ಬ್ಯಾಲೆನ್ಸ್ ಕಡಿಮೆ ಇದ್ದಾಗ ಬೇರೆಯವರಿಂದ ಹಣ ಹಾಕಿಸಿಕೊಳ್ಳುವಂತೆ ಒತ್ತಡ ಹಾಕಿದ್ದಾರೆ. ಶಿವರಾಜ್ ತನ್ನ ಸ್ನೇಹಿತ ಮಹೇಂದ್ರ ಎಂಬುವರಿಂದ 15,375 ರೂ. ಹಣ ಹಾಕಿಸಿಕೊಂಡರು. ಅದನ್ನು ಡ್ರಾ ಮಾಡಲು ಅರಸೀಕೆರೆಗೆ ಬಂದು, ಅಕೌಂಟ್‌ನಲ್ಲಿದ್ದ 16,700 ರೂ. ಡ್ರಾ ಮಾಡಿಕೊಂಡು ಬೆಂಗಳೂರು ರಸ್ತೆಯ ಮೈಲನಹಳ್ಳಿ ಗೇಟ್ ಬಳಿ ಕಾರು ನಿಲ್ಲಿಸಿ ಮತ್ತೆ ಹಣ ಹಾಕಿಸಿಕೋ ಎಂದು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಶಿವರಾಜ್ ಇಲ್ಲ ಎಂದಾಗ ಲ್ಯಾಪ್‌ಟ್ಯಾಪ್, ಮೊಬೈಲ್ ಕೊಡಲ್ಲ ಎಂದಿದ್ದಾರೆ. ನನ್ನ ಕೆಲಸಕ್ಕೆ ಲ್ಯಾಪ್‌ಟ್ಯಾಪ್ ಬೇಕೇ ಬೇಕು ಎಂದು ಬೇಡಿಕೊಂಡಾಗ ಲ್ಯಾಪ್‌ಟ್ಯಾಪ್, ಮೊಬೈಲ್ ಮತ್ತು ಕ್ರೆಡಿಟ್ ಕಾರ್ಡ್, ಎಟಿಎಂ ಕಾರ್ಡ್ ತಾವೇ ಇಟ್ಟುಕೊಂಡು ಮೈಲನಹಳ್ಳಿ ಗ್ರಾಮದ ಹತ್ತಿರ ಶಿವರಾಜ್‌ರನ್ನು ಇಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಜೀವ ಉಳಿಸಿಕೊಂಡು ಬಂದ ಶಿವರಾಜ್, ಅರಸೀಕೆರೆ ನಗರ ಠಾಣೆಗೆ ದೂರು ನೀಡಿದ್ದಾರೆ.