ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೇರಿ ರಾಜ್ಯದ ದ್ವಿತೀಯ ಸ್ತರದ ನಗರಗಳಿಗೂ ಡ್ರಗ್ಸ್ ಮಾಫಿಯಾ ಹಬ್ಬಿದೆ, ಮಾದಕ ದ್ರವ್ಯ ಸೇವನೆ ಮಾಡುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳದೇ ಪೂರೈಕೆ ಜಾಲ ಭೇದಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ ಸೂದ್ ತಿಳಿಸಿದರು.
ನಗರದಲ್ಲಿ ಬುಧವಾರ ಧಾರವಾಡ ಜಿಲ್ಲಾ ಪೊಲೀಸ್ ಹಾಗೂ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಅಧಿಕಾರಿಗಳ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋವಾ, ಹೈದರಾಬಾದ್ ಮುಂತಾದೆಡೆಯಿಂದ ಹುಬ್ಬಳ್ಳಿಗೆ ಡ್ರಗ್ಸ್ ಬರುತ್ತದೆ ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆದಿದೆ. ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ. ಬೆಂಗಳೂರು ಸೇರಿ ವಿವಿಧೆಡೆ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ತನಿಖೆ ಚುರುಕುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದರ ಫಲಿತಾಂಶ ಜನರ ಮುಂದೆ ಬರಲಿದೆ ಎಂದರು.
ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟ- ನಟಿಯರ ಬಗ್ಗೆ ಈಗಲೇ ಹೇಳುವುದಿಲ್ಲ. ಬೆಂಗಳೂರು ಸಿಸಿಬಿ, ಎನ್ಸಿಬಿಯವರು ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ. ಒಂದೊಮ್ಮೆ ಆರೋಪ ಪಟ್ಟಿ ಸಲ್ಲಿಕೆಯಾದರೆ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಬಹುದು ಎಂದರು.
ಬೆಂಗಳೂರಲ್ಲಿ ಮಾತ್ರ ಸಿಸಿಬಿ ಕ್ರಿಯಾಶೀಲವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸೂದ್ ಅವರು, ರಾಜ್ಯದ ಇತರ ಮಹಾನಗರಗಳಲ್ಲೂ ಕ್ರಿಯಾಶೀಲಗೊಳಿಸಲಾಗುವುದು. ಈ ಬಗ್ಗೆಯೂ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮ ನೋಡುತ್ತೀರಿ. ಹುಬ್ಬಳ್ಳಿಗೂ ಬಾಂಬ್ ನಿಷ್ಕ್ರಿಯ ದಳ ನೀಡುವ ವಿಷಯ ಪರಿಶೀಲನೆಯಲ್ಲಿದೆ ಎಂದರು.
ಡಯಲ್ 100 ಮೇಲ್ದರ್ಜೆಗೆ
ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಪೊಲೀಸ್ ಸಹಾಯ ಕೇಳಿದರೆ ಲಭ್ಯ ಇರಬೇಕು. ಹಾಗಾಗಿ ಡಯಲ್ 100 ಅನ್ನು ಹೆಚ್ಚು ಕ್ರಿಯಾಶೀಲಗೊಳಿಸಲು ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದರು.
ಠಾಣೆ ಅಥವಾ ಹಿರಿಯ ಅಧಿಕಾರಿಗಳಲ್ಲಿಗೆ ನ್ಯಾಯ ಕೇಳಿ ಬರುವ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತದೆ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ; ಪರಿಶೀಲಿಸುತ್ತೇನೆ ಎಂದರು.
ಸಿಬ್ಬಂದಿ ಕೊರತೆ ಇರುವುದು ನಿಜ. ಹುಬ್ಬಳ್ಳಿ- ಧಾರವಾಡದಲ್ಲಿ ಸದ್ಯ 75 ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ ನಡೆದಿದೆ. ಅಗತ್ಯವಾದ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಒಂದೊಮ್ಮೆ ಪೊಲೀಸ್ ಕೆಲಸಕ್ಕೆ ಸೇರಿದವರು ಮುಂದೆ ಹೆಚ್ಚಿನ ಹುದ್ದೆಗಳಿಗೆ ಪ್ರಯತ್ನ ಮಾಡುತ್ತಾರೆ. ಅಂಥವರಿಗೆ ಉತ್ತೇಜನವನ್ನೂ ನೀಡುತ್ತಿದ್ದೇವೆ. ಈ ರೀತಿ ಖಾಲಿಯಾದ ಸ್ಥಾನಗಳಿಂದ ಕೊರತೆ ಕಾಣುತ್ತಿದೆ. ಅದಕ್ಕಾಗಿ ಭರ್ತಿ ಕಾರ್ಯವೂ ಜೊತೆಯಲ್ಲೇ ನಡೆಯಲಿದೆ ಎಂದರು.
ಅವಳಿನಗರದಲ್ಲಿ ಅಪರಾಧ ಜಾಸ್ತಿ
ಹುಬ್ಬಳ್ಳಿ- ಧಾರವಾಡದಲ್ಲಿ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿರುವುದನ್ನು ಡಿಜಿಪಿ ಒಪ್ಪಿಕೊಂಡರು. ಮುಂಬರುವ ದಿನಗಳಲ್ಲಿ ಅದನ್ನು ತಡೆಗಟ್ಟಲು ಹೆಚ್ಚು ಜಾಗೃತಿ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗೃಹ ಸಚಿವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹಾಗಾಗಿ ಒಟ್ಟಾರೆ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ನಡೆದಿದೆ. ಧಾರವಾಡ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣವನ್ನು ಅಗತ್ಯ ಬಿದ್ದರೆ ಹಿರಿಯ ಅಧಿಕಾರಿಗಳ ನೇತೃತ್ವದ ತಂಡದಿಂದ ತನಿಖೆ ಮಾಡಿಸಲಾಗುವುದು. ಅವಳಿ ನಗರದಲ್ಲಿ ಶಾಂತಿ ಭಂಗ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸುರಕ್ಷಿತ ಕರ್ತವ್ಯ ನಿರ್ವಹಣೆ
ಈಗಷ್ಟೇ ಪೊಲೀಸರ ಸಾಮಾನ್ಯ ಕೆಲಸ ಆರಂಭವಾಗಿದೆ. ಈವರೆಗೆ ಕರೊನಾ ಸಲುವಾಗಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಕರೊನಾ ಸದ್ಯಕ್ಕೆ ಹೋಗುವುದಿಲ್ಲ. ಲಾಕ್ಡೌನ್ ಇತ್ಯಾದಿ ಸಂದರ್ಭದಲ್ಲಿ ಪೊಲೀಸರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದು ಡಿಜಿಪಿ ತಿಳಿಸಿದರು. ಆರು ಸಾವಿರ ಪೊಲೀಸರಿಗೆ ಕರೊನಾ ಸೋಂಕು ತಗುಲಿದೆ. 40ಕ್ಕೂ ಹೆಚ್ಚು ಸಿಬ್ಬಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಕರೊನಾ ಸಂದರ್ಭದಲ್ಲಿ ಸುರಕ್ಷಿತವಾಗಿ ಕರ್ತವ್ಯ ನಿರ್ವಹಣೆ ಮಾಡುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಪೊಲೀಸ್ ಕೆಲಸದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ತಾಂತ್ರಿಕ ಸವಲತ್ತುಗಳನ್ನು ಬಳಸಿಕೊಳ್ಳುವ ಬಗ್ಗೆಯೂ ರ್ಚಚಿಸಲಾಯಿತು ಎಂದು ಸೂದ್ ವಿವರಿಸಿದರು.
EndFragment