ಜಿಲ್ಲೆ

ಡ್ರಗ್ಸ್ ಮಾಫಿಯಾ ಮಟ್ಟ ಹಾಕ್ತೇವೆ

ಕಲಬುರಗಿ: ಬೆಂಗಳೂರಿನಲ್ಲಿ ಬಯಲಿಗೆ ಬಂದಿರುವ ಡ್ರಗ್ಸ್ ಮಾಫಿಯಾ ಸೇರಿ ರಾಜ್ಯಾದ್ಯಂತ ಮಾದಕ ವಸ್ತುಗಳ ದಂಧೆಯನ್ನು ಬೇರು ಸಮೇತ ಕಿತ್ತು ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ನೂತನ ಪದಾಧಿಕಾರಿಗಳ ಮತ್ತು ಕೋರ್ ಕಮೀಟಿ ಹಾಗೂ ಪಕ್ಷದ ಸಂಘಟನಾ ಸಭೆ ನಡೆಸಲು ನಗರಕ್ಕೆ ಆಗಮಿಸಿದ್ದ ಅವರು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಸರ್ಕಾರವೇ ಡ್ರಗ್ಸ್ ದಂಧೆ ಬಯಲಿಗೆಳೆದಿದೆ. ಆದರೆ ಹಿಂದಿನ ಸರ್ಕಾರ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಈ ನಿಟ್ಟಿನಲ್ಲಿ ದೃಢ ಮತ್ತು ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲಿದ್ದಾರೆ. ಇದು ಕೇವಲ ಚಿತ್ರರಂಗದ್ದಲ್ಲ, ಮುಂದಿನ ಪೀಳಿಗೆಯ ಪ್ರಶ್ನೆಯಾಗಿದೆ. ಮಾದಕ ವಸ್ತು ಮುಕ್ತ ಸಮಾಜ ನಮ್ಮ ಕಲ್ಪನೆಯಾಗಿದೆ. ಬೆಂಗಳೂರು ಇತರ ಕಡೆ ಬೇರೂರಿರುವ ಡ್ರಗ್ಸ್​ ದಂಧೆಯಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ಹೀಗಾಗಿ ಈ ಹಿಂದೆ ನಾವು ಹೋರಾಟ ಮಾಡಿದರೂ ಆಗಿನ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಈಗ ನಮ್ಮ ಸರ್ಕಾರವೇ ಅದನ್ನು ತೊಡೆದು ಹಾಕಲು ಮುಂದಾಗಿದೆ ಎಂದರು.
ಕರೊನಾ ಹಿನ್ನೆಲೆಯಲ್ಲಿ ಖಾಸಗಿ ಶಾಲಾ-ಕಾಲೇಜು ಅಧ್ಯಾಪಕರಿಗೆ ವೇತನ ನೀಡುವಂತೆ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಆನ್ಲೈನ್ ಮತ್ತು ವರ್ಚವಲ್ ತರಗತಿ ನಡೆಸಲು ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ ಶುಲ್ಕ ಸಂಗ್ರಹಿಸಬಹುದಾಗಿದೆ. ಆದರೆ ಕಡ್ಡಾಯವಲ್ಲ. ಖಾಸಗಿ ಶಿಕ್ಷಕರ ಸಮಸ್ಯೆ ಸರ್ಕಾರದ ಗಮನಕ್ಕಿದ್ದು, ಪರಿಹರಿಸಲು ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ವಿಭಾಗೀಯ ಪ್ರಭಾರಿಯಾಗಿರುವ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರದ್ದೇವಾಡಗಿ, ಶಾಸಕರಾದ ಬಸವರಾಜ ಮತ್ತಿಮೂಡ, ಸುನೀಲ್ ವಲ್ಯಾಪುರೆ, ಬಿ.ಜಿ.ಪಾಟೀಲ್, ಮಾಜಿ ಶಾಸಕ ಶಶೀಲ್ ನಮೋಶಿ, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಇತರರಿದ್ದರು.

ಕಾರ್ಯಕರ್ತರಿಂದ ಬೆಳೆದ ಪಕ್ಷದ ಬಿಜೆಪಿ
ಬಿಜೆಪಿ ಕಾರ್ಯಕರ್ತರಿಂದಲೇ ಈ ಮಟ್ಟಕ್ಕೆ ಬೆಳೆದಿದೆ. ಎಲ್ಲ ಶ್ರೇಯಸ್ಸು ನಿಷ್ಠಾವಂತ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು. ಎಚ್ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಪಕ್ಷದ ನಗರ ಜಿಲ್ಲಾ ಘಟಕ ಪದಾಧಿಕಾರಿಗಳ ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರೇ ಪಕ್ಷದ ಜೀವಾಳ. ಅವರಿಂದಲೇ ಪಕ್ಷ ಬೆಳೆದು ಅಧಿಕಾರಕ್ಕೆ ಬಂದಿದೆ ಎಂದರು. ಪಕ್ಷದ ಸಂಘಟನೆ ಜತೆಗೆ ಕರೊನಾದಿಂದ ಸಂಕಷ್ಟಕ್ಕೆ ಒಳಗಾದ ಕನಿಷ್ಠ ಐವರಿಗೆ ಸ್ಪಂದಿಸುವಂತೆ ಪ್ರತಿಯೊಬ್ಬ ಕಾರ್ಯಕರ್ತ ಸಹಕಾರ ನೀಡಬೇಕು. ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಸುರಕ್ಷತಾ ಕ್ರಮಗಳೊಂದಿಗೆ ನಡೆಸಲು ಸಹ ತಿಳಿಸಲಾಗಿದೆ ಎಂದು ಹೇಳಿದರು. ಪಕ್ಷದ ಸಂಘಟನೆ ಕುರಿತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಬಿ.ಪಿ. ಎಲ್ಲರಿಂದಲೂ ವಿವರಣೆ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಿ.ಜಿ.ಪಾಟೀಲ್, ಸುನೀಲ್ ವಲ್ಯಾಪುರೆ, ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ, ಉಪಾಧ್ಯಕ್ಷ ವಿಜಯಕುಮಾರ ಸೇವಲಾನಿ, ಪ್ರಧಾನ ಕಾರ್ಯದರ್ಶಿಗಳಾದ ಸೂರಜ್ ತಿವಾರಿ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಸಾಹೇಬಗೌಡ ಪಾಟೀಲ್, ಪ್ರಮುಖರಾದ ರವಿಚಂದ್ರ ಕಾಂತಿಕರ್, ಪದ್ಮಜಾ ರೆಡ್ಡಿ, ವಿಜಯಲಕ್ಷ್ಮಿ ಗೊಬ್ಬುರಕರ್, ಸಾವಿತ್ರಿ ಕುಳಗೇರಿ, ಅರುಣ ಕುಲಕರ್ಣಿ ಇತರರಿದ್ದರು.