ಕೋಲಾರ: ಡ್ರಗ್ಸ್ ಮಾಫಿಯಾ ಮಟ್ಟ ಹಾಕಬೇಕೆಂಬ ಉದ್ದೇಶದಿಂದ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿರುವ ಬೆನ್ನಲ್ಲೇ ಜಿಲ್ಲೆಯ ಪೊಲೀಸರು ಎಚ್ಚೆತ್ತುಕೊಂಡು ಅಭಿಯಾನ ಕೈಗೊಂಡಿದ್ದಾರೆ.
ಜಿಲ್ಲೆಯ ವಿವಿಧೆಡೆಯಿಂದ ಸುಮಾರು 200 ಯುವಕರನ್ನು ಶುಕ್ರವಾರ ಪೊಲೀಸ್ ಭವನಕ್ಕೆ ಕರೆಸಿ ವಿಚಾರಣೆ ನಡೆಸಿ, ಪರೀಕ್ಷೆಗೆ ಒಳಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಮಾದಕ ವಸ್ತು ಬಳಕೆಯಾಗುತ್ತಿರುವ ಜಾಗವನ್ನು ಮೊದಲು ಗುರುತಿಸಿಕೊಂಡು ಅಲ್ಲಿಂದ ಯುವಕರನ್ನು ಕರೆತಂದು ವಿಚಾರಿಸಿದ್ದೇವೆ. ಎಲ್ಲರನ್ನೂ ಪರೀಕ್ಷೆ ಮಾಡಲಾಗುವುದು. ಪಾಸಿಟಿವ್, ನೆಗೆಟಿವ್ ಎಷ್ಟಿದೆ ಎಂಬುದನ್ನು ಪರಿಶೀಲಿಸಲಿದ್ದೇವೆ. ನಾವು 10 ಮಂದಿಯನ್ನು ಪರೀಕ್ಷಿಸಿದ್ದು, ಐವರಲ್ಲಿ ಪಾಸಿಟಿವ್ ಬಂದಿದೆ.
ಹೀಗೆಯೇ, ಕಾರ್ಯಾಚರಣೆ ಮುಂದುವರಿಯಲಿದೆ ಎಂದರು. ಕೋಲಾರ, ನರಸಾಪುರ, ವೇಮಗಲ್, ಗಲ್ಪೇಟೆ, ಮುಳಬಾಗಿಲು, ಮಾಲೂರಿನಿಂದ ಕರೆ ತಂದಿದ್ದೇವೆ. ಯಾರ ಮೇಲೆ ಅನುಮಾನ ಬರುತ್ತದೆಯೋ ಅಂಥವರನ್ನು ಕರೆತಂದು ಪರೀಕ್ಷೆ ಮಾಡುತ್ತೇವೆ. ಪಾಲಕರು ಎಚ್ಚರಿಕೆ ವಹಿಸಬೇಕು. ಯಾರ ಜತೆ ಮಾತನಾಡುತ್ತಾರೆ, ಏಕೆ ಮನೆಗೆ ತಡವಾಗಿ ಬರುತ್ತಾರೆ ಎಂಬುದನ್ನು ಗಮನಿಸಬೇಕು ಎಂದು ಮನವಿ ಮಾಡಿದರು. ಅಭಿಯಾನದಲ್ಲಿ ಯುವಕರನ್ನು ಸಾಲಾಗಿ ನಿಲ್ಲಿಸಿ ವಿಚಾರಣೆ ನಡೆಸಲಾಯಿತು. ಕೆಲವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ ಹಾಜರಿದ್ದರು.