ಜಿಲ್ಲೆ

ಡ್ರಗ್ಸ್ ನಿಯಂತ್ರಣ ಜಾಗೃತಿಗೆ ಬೃಹತ್ ಮ್ಯಾರಥಾನ್

ಚಿತ್ರದುರ್ಗ: ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಫಿಟ್‌ನೆಸ್ ಫಾರ್ ಆಲ್, ಡ್ರಗ್ಸ್ ನಿಯಂತ್ರಣ ಜಾಗೃತಿಗೆ ಜಿಲ್ಲಾ ಪೊಲೀಸ್ ಮತ್ತು ಎಸ್‌ಬಿಐ ವತಿಯಿಂದ ನಗರದಲ್ಲಿ ಭಾನುವಾರ 5 ಮತ್ತು 10 ಕಿ.ಮೀ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಕಾಲೇಜುಗಳ ನೂರಾರು ಯುವಕ-ಯುವತಿಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ಡಿಎಆರ್ ಪರೇಡ್ ಮೈದಾನದಿಂದ ಆರಂಭವಾದ ಮ್ಯಾರಥಾನ್‌ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಡ್ರಗ್ಸ್ ಪ್ರೀ ಕರ್ನಾಟಕ ಆಂದೋಲನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ವಾಸವಿ ಲ್ಯಾಬ್, ಹಳೆ ಮತ್ತು ಹೊಸ ಡಿಪೋ ರಸ್ತೆ, ಜಿಲ್ಲಾ ಕ್ರೀಡಾಂಗಣ, ಪರಿಸರ ಬಿಲ್ಡಿಂಗ್, ಬುದ್ಧ ಸರ್ಕಲ್, ಜ್ಞಾನ ದೀಪ ವಿದ್ಯಾಮಂದಿರ, ಜೋಗಿಮಟ್ಟಿ ರಸ್ತೆ, ರಾಜಬೀದಿ ರಂಗಯ್ಯನ ಬಾಗಿಲು, ಉಚ್ಚಂಗಿ ಯಲ್ಲಮ್ಮ ದೇಗುಲ, ಆನೆ ಬಾಗಿಲು, ಲಕ್ಷ್ಮೀ ಬಜಾರ್, ಗಾಂಧಿ ವೃತ್ತ, ಸಂತೆಹೊಂಡ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ, ವಾಸವಿ, ಜಿಲ್ಲಾಧಿಕಾರಿ ವೃತ್ತ, ತಿಪ್ಪಜ್ಜಿ ಸರ್ಕಲ್, ಕೋರ್ಟ್ ಮುಂಭಾಗದ ಮಾರ್ಗಗಳಲ್ಲಿ ಸಂಚರಿಸಿತು.

ಇದೇ ವೇಳೆ ನಶೆ ಮುಕ್ತ ಕರ್ನಾಟಕ, ಪ್ರತೀಕಾರದ ಅಶ್ಲೀಲತೆ, ಸೈಬರ್ ಅಪರಾಧ ಸೇರಿ ಇನ್ನಿತರ ವಿಷಯಗಳ ಕುರಿತು ಸಮಗ್ರ ಮಾಹಿತಿ ಒಳಗೊಂಡ ಪೋಸ್ಟರ್‌ಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಯಿತು.

ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ ಮಾತನಾಡಿ, ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಕಾರ್ಯಕ್ರಮ ಮೆಚ್ಚುವಂತದ್ದು. ಈ ರೀತಿ ಆಗಿಂದಾಗ್ಗೆ ನಡೆಯಬೇಕು. ಎಲ್ಲರೂ ನಿರಂತರ ಓಟ, ವ್ಯಾಯಾಮದಲ್ಲಿ ತೊಡಗಿ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿ 1,500ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದರು.

ವಿಜೇತರಿಗೆ ಬಹುಮಾನ: 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ವಿಜೇತ ಪುರುಷರ ವಿಭಾಗದ ರಂಗಣ್ಣ, ಜೋಶವ್, ಟಿ.ಕುಶಾಲ್, ಮಹಿಳಾ ವಿಭಾಗದ ಸಿರಿಷಾ, ರೇವತಿ, ಪೂರ್ವಿಕ ಎನ್.ರಾಜ್, ಅದೇ ರೀತಿ 10 ಕಿ.ಮೀ ಓಟದ ಸ್ಪರ್ಧೆಯಲ್ಲಿ ವಿಜೇತ ಪುರುಷರ ವಿಭಾಗದ ಸಿದ್ಧಪ್ಪ ನರಸಿಂಹಪ್ಪನವರ್, ನಾಗರಾಜ್, ಸಂಜಯ್, ಮಹಿಳಾ ವಿಭಾಗದ ಬಿಂದು, ಐಸಿರಿ, ವೃಂದ ಕ್ರಮವಾಗಿ ಪ್ರಥಮ-5ಸಾವಿರ ರೂ., ದ್ವಿತೀಯ-4ಸಾವಿರ ರೂ., ತೃತೀಯ-3ಸಾವಿರ ರೂ. ನಗದು ಬಹುಮಾನ ಪಡೆದರು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.