ಹುಬ್ಬಳ್ಳಿ: ಕೋವಿಡ್ ವೈರಸ್ ಸರಪಳಿ ತುಂಡರಿಸಲು ಘೊಷಿಸಲಾಗಿರುವ ಲಾಕ್ಡೌನ್ ಅನುಷ್ಠಾನಕ್ಕೆ ಪೂರಕವಾಗಿ ಸಾರ್ವಜನಿಕರು ದಿನಸಿ, ತರಕಾರಿ, ಹಣ್ಣು ಹಂಪಲು, ಮಾಂಸ ಇತ್ಯಾದಿಗಳನ್ನು ಮನೆಗೇ ತರಿಸಿಕೊಳ್ಳಲು ಮಾಡಿರುವ ವ್ಯವಸ್ಥೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಿಫಲವಾಗಿದೆ.
ಜನತಾ ಕರ್ಫ್ಯೂ ಪೂರ್ತಿ ಪಾಲನೆಯಾಗಿಲ್ಲ. ನಂತರದ ಲಾಕ್ಡೌನ್ ಆದೇಶವನ್ನೂ ಅನೇಕರು ಉಲ್ಲಂಘಿಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಯವರೆಗೆ ದಿನಸಿ ಖರೀದಿಗೆ ಅವಕಾಶ ಇದೆ. ಅಷ್ಟರೊಳಗೆ ಖರೀದಿ ಮಾಡಿದರೂ ಮನೆ ಸೇರಲು ತಡ ಮಾಡುತ್ತಾರೆ. ಪೊಲೀಸರು ಕೇಳಿದರೆ ಸಾಮಗ್ರಿ ಚೀಟಿ, ಕೈ ಚೀಲ ತೋರಿಸಿ ಯಾಮಾರಿಸುವವರೂ ಇದ್ದಾರೆ. ಹಾಗೆಯೇ, ವಯಸ್ಸಾದವರು ಮತ್ತು ಮಹಿಳೆಯರಿಗೆ ಬೆಳಗ್ಗೆ 10 ಗಂಟೆಯೊಳಗೆ ಖರೀದಿ ಪೂರ್ಣಗೊಳಿಸಿಕೊಂಡು ಮನೆ ಸೇರುವುದು ಕಷ್ಟವೂ ಹೌದು.
ಈ ಎಲ್ಲದರ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಕುಳಿತು ಖರೀದಿಸಲಿ, ಫೋನ್/ವಾಟ್ಸ್ಆಪ್ ಮೂಲಕ ಅಗತ್ಯ ವಸ್ತುಗಳ ಯಾದಿಯನ್ನು ತಿಳಿಸಿ, ಮನೆಗೇ ತರಿಸಿಕೊಳ್ಳಲಿ ಎಂದು ಧಾರವಾಡ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಬಯಸಿವೆ. ಅದಕ್ಕಾಗಿ ದಿನಸಿ, ತರಕಾರಿ, ಹಣ್ಣು ಹಂಪಲು, ಮೀನು ಸೇರಿದಂತೆ ಮಾಂಸ ಮಾರಾಟ ಮಾಡುವ 1239 ನೋಂದಾಯಿತ ವ್ಯಾಪಾರಿಗಳು ಹಾಗೂ 23 ಸೂಪರ್ ಮಾರ್ಕೆಟ್ಗಳ ಯಾದಿಯನ್ನು ಮೇ 12ರಂದು ಮಹಾನಗರ ಪಾಲಿಕೆಯ ಡಿಡಿಡಿ.ಜಛಞ್ಚ.ಞ್ಟ್ಚಜಟಡ.ಜ್ಞಿ ಮತ್ತು ಜಿಲ್ಲಾಡಳಿತದ ಡಿಡಿಡಿ.ಠ್ಠಟಟಟ್ಟಠಿಛಜಚ್ಟಡಿಚಛ.ಜ್ಞಿ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ವಾರ್ಡ್ವಾರು ವಿಂಗಡಣೆ ಸಹಿತವಾಗಿ ಇರುವ ಯಾದಿಯಲ್ಲಿ ಅಂಗಡಿ ಹೆಸರು/ ಮಾರಾಟಗಾರರ ಹೆಸರು, ದೂರವಾಣಿ ಸಂಖ್ಯೆ, ಯಾವ ಪ್ರದೇಶದವರು ಯಾವ ಭಾಗಕ್ಕೆ ಪೂರೈಸುತ್ತಾರೆ ಎಂಬ ಸ್ಥೂಲ ಮಾಹಿತಿ ಇದೆ.
ಸಾರ್ವಜನಿಕರು ತಮ್ಮ ಭಾಗದ ಅಂಗಡಿಕಾರರನ್ನು ಸಂರ್ಪಸಿ ಅಗತ್ಯ ವಸ್ತುಗಳ ಪಟ್ಟಿ ಹಾಗೂ ಮನೆಗಳ ವಿಳಾಸ ನೀಡಿದರೆ ಅಂಗಡಿಕಾರರು ಪ್ಯಾಕ್ ಮಾಡಿ ಮನೆಗೆ ತಲುಪಿಸುತ್ತಾರೆ ಎಂದು ಮಹಾನಗರ ಪಾಲಿಕೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿತ್ತು.
ಹೀಗೆ ಅನುಕೂಲತೆ ಕಲ್ಪಿಸಿದ ಮೇಲೆಯೂ ಜನರು ಹೊರಗಡೆ ಓಡಾಡುವುದು, ಬೆಳಗ್ಗೆ ಅಂಗಡಿಗಳ ಎದುರು ಸಾಲು ಕಂಡುಬರುವುದು ಮೊದಲಿನಂತೆಯೇ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ ರಿಯಾಲಿಟಿ ಚೆಕ್ಗಾಗಿ ಹಲವು ವ್ಯಾಪಾರಿಗಳನ್ನು ಸಂರ್ಪಸಿದಾಗ, ಅಗತ್ಯ ವಸ್ತುಗಳನ್ನು ಮನೆಗೆ ತರಿಸಿಕೊಳ್ಳಲು ಯಾರೂ ಇಷ್ಟಪಡುತ್ತಿಲ್ಲ ಎನ್ನುವುದು ಖಚಿತವಾಯಿತು. ಯಾರೋ ಒಬ್ಬಿಬ್ಬರು ಫೋನ್ ಮಾಡಿ ವಿಚಾರಿಸಿದರೇ ವಿನಃ ಮನೆಗೆ ತಂದು ತಲುಪಿಸುವಂತೆ ಆರ್ಡರ್ ಕೊಟ್ಟಿಲ್ಲ ಎಂದು ಧಾರವಾಡ ಸೈದಾಪುರದ ನಾರಾಯಣ ಪವಾರ, ಭಾವಿಕಟ್ಟಿ ಪ್ಲಾಟ್ನ ರಾಜೇಶ ಮೊಕಾಶಿ, ಹುಬ್ಬಳ್ಳಿ ಗಾಂಧಿ ನಗರದ ತರಕಾರಿ ವ್ಯಾಪಾರಿ ಪ್ರಕಾಶ ನರಗುಂದ ತಿಳಿಸಿದರು.
ವೈಫಲ್ಯಕ್ಕೆ ಪ್ರಮುಖ ಕಾರಣಗಳು
*ವೈಜ್ಞಾನಿಕವಾಗಿ ರೂಪಿಸದೆ ಕಾಟಾಚಾರಕ್ಕೆ ಎಂಬಂತೆ ಜಾರಿ ಮಾಡಿರುವುದು.
*ಕಿರಾಣಿ ವರ್ತಕರ ಜತೆ ರ್ಚಚಿಸದೇ ಇರುವುದು.
*ಡೋರ್ ಡಿಲಿವರಿಗೂ ಬೆಳಗ್ಗೆ 6ರಿಂದ 10ರ ಸಮಯವನ್ನೇ ನಿಗದಿ ಮಾಡಿರುವುದು.
* ಕನಿಷ್ಠ ಮೊತ್ತದ ವಹಿವಾಟು ಎಷ್ಟು ಎಂಬುದನ್ನು ನಿಗದಿ ಮಾಡದಿರುವುದು.
ವ್ಯಾಪಾರಿಗಳಿಗೆ ಸಲೀಸಲ್ಲ
ಡೋರ್ ಡಿಲಿವರಿ ಮಾಡಲು ವ್ಯಾಪಾರಿಗಳಿಗೆ ಸಮಯದಲ್ಲಿ ರಿಯಾಯಿತಿ, ಪಾಸ್ ಇತ್ಯಾದಿ ಯಾವುದೇ ಸೌಲಭ್ಯ ಇಲ್ಲ. ಅಂಗಡಿ ತೆಗೆಯುವ ಸಮಯದಲ್ಲೇ (ಬೆಳಗ್ಗೆ 10 ಗಂಟೆಯೊಳಗೆ) ಪ್ಯಾಕಿಂಗ್, ಪಾರ್ಸೆಲ್ ತಲುಪಿಸುವಿಕೆ ಎಲ್ಲವೂ ಆಗಬೇಕಾಗುತ್ತದೆ. ಅಂದರೆ, ವಾಹನ ಹಾಗೂ ಹುಡುಗರನ್ನು ಇಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ. ಹೀಗಾಗಿ, ಡೋರ್ ಡಿಲಿವರಿ ಆರ್ಡರ್ ಬರದಿದ್ದರೆ ಚಿಂತೆಯಿಲ್ಲ ಎನ್ನುತ್ತಾರೆ ಅನೇಕ ಅಂಗಡಿಕಾರರು.
ಒಂದು ಹಾಲಿನ ಪ್ಯಾಕೆಟ್, ಒಂದಿಷ್ಟು ಚಿಪ್ಸ್ ಪ್ಯಾಕೆಟ್ ತಂದು ಕೊಡುತ್ತೀರಾ ಎಂದು ಕೇಳಿದವರಿದ್ದಾರೆ. ಅದೂ 10 ಗಂಟೆ ನಂತರದಲ್ಲಿ. ಅಷ್ಟು ಕಡಿಮೆ ವಸ್ತು ಪೂರೈಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಆರ್ಡರ್ ಕೊಟ್ಟಿಲ್ಲ. ಅಂಗಡಿಗೇ ಬಂದು ಒಯ್ಯುತ್ತಾರೆ.| ವಿನೋದ ಕಾಟವೆ ಕಿರಾಣಿ ವರ್ತಕ ನವನಗರ
ಬೆಳಗ್ಗೆ 7ರ ಹೊತ್ತಿಗೆ ಅಂಗಡಿ ತೆಗೆದರೆ 9.30ರ ಹೊತ್ತಿಗೆಲ್ಲ ಪೊಲೀಸರು ಬಂದು ಬಾಗಿಲು ಹಾಕಿ ಎಂದು ಸೂಚನೆ ಕೊಟ್ಟು ಹೋಗುತ್ತಾರೆ. ಅಷ್ಟು ಸಮಯದಲ್ಲಿ ಅಂಗಡಿಗೆ ಬಂದವರಿಗೆ ಸೇವೆ ನೀಡುತ್ತೇವೆ. ಮನೆಗೆ ತಂದುಕೊಡಿ ಎಂದು ಈವರೆಗೆ ಒಬ್ಬರೂ ಫೋನ್ ಮಾಡಿಲ್ಲ.| ಗೌತಮಚಂದ ಎಂ. ಜೈನಪಿತ್ತಾಜೀಸ್ ಜನರಲ್ ಸ್ಟೋರ್, ಸ್ಟೇಶನ್ ರಸ್ತೆ ಹುಬ್ಬಳ್ಳಿ
ಸೂಪರ್ ಮಾರ್ಕೆಟ್ಗೆ ಬರುತ್ತವೆ ಕರೆಗಳು
ಸೂಪರ್ ಮಾರ್ಕೆಟ್ಗಳಿಂದ ಮನೆಗೆ ನೇರ ಪೂರೈಕೆ ಮಾಡಿಸಿಕೊಳ್ಳುವವರು ಇದ್ದಾರೆ. ಆದರೆ, ಇದು ಪಾಲಿಕೆಯವರು ಯಾದಿ ಪ್ರಕಟಿಸಿದ ನಂತರದ ಬೆಳವಣಿಗೆ ಅಲ್ಲ. ಸೂಪರ್ ಮಾರ್ಕೆಟ್ನವರು ವಿವಿಧ ಕೊಡುಗೆ ಘೊಷಣೆ ಮಾಡಿ, ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಸಾಮಗ್ರಿ ಖರೀದಿಸಿದರೆ ಉಚಿತ ಡೋರ್ ಡಿಲಿವರಿ ಸೌಲಭ್ಯ ಇದೆ ಎಂದು ಆಗಾಗ ಪ್ರಚಾರ ಮಾಡುತ್ತಾರೆ. ಈ ಸೌಲಭ್ಯವನ್ನು ಒಂದಿಷ್ಟು ಜನರು ಬಳಸಿಕೊಳ್ಳುತ್ತಿದ್ದಾರೆ.
ತರಕಾರಿಗೆ ಇಲ್ಲ ಸಮಸ್ಯೆ
ತರಕಾರಿಯನ್ನು ತಳ್ಳು ಗಾಡಿಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ ಎಲ್ಲ ಬಡಾವಣೆಗಳಿಗೆ ತರಕಾರಿ ಗಾಡಿಯವರು ತೆರಳುತ್ತಾರೆ ಅಥವಾ ಅಲ್ಲಲ್ಲಿ ರಸ್ತೆ ಪಕ್ಕದಲ್ಲಿಟ್ಟು ಮಾರುತ್ತಾರೆ. ಇದರಿಂದ, ಅವಳಿ ನಗರದಲ್ಲಿ ತರಕಾರಿಗಳನ್ನು ಫೋನ್ ಮಾಡಿ ತರಿಸಿಕೊಳ್ಳುವ ಪ್ರಮೇಯ ಉದ್ಭವಿಸುತ್ತಿಲ್ಲ.