ಮೈಸೂರು: ವಲಸಿಗರಿಗೆ ನಿಬರ್ಂಧ ಹೇರುವ ನಿಟ್ಟಿನಲ್ಲಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಸುಧಾರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಕೆ.ಬಿ.ಗಣಪತಿ ಅಭಿಪ್ರಾಯಪಟ್ಟರು.
ವಿಜಯನಗರ 4ನೇ ಹಂತದ ಕಲ್ಪ ಕ್ಷೇತ್ರ ಸಭಾಂಗಣದಲ್ಲಿ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿಶ್ವ ವ್ಯವಸ್ಥೆಗೆ ಸವಾಲು ಕುರಿತು ಮೈಸೂರು ಓಪನ್ ಫೋರಂ ಆಯೋಜಿಸಿದ್ದ ಚರ್ಚಾಕೂಟದಲ್ಲಿ ಮಾತನಾಡಿದರು.
ಮುಂದಿನ 4 ವರ್ಷ ಅಧಿಕಾರಾರದಲ್ಲಿ ಅವರು ಕೈಗೊಳ್ಳಲಿರುವ ಹಲವು ನಿರ್ಧಾರಗಳು ಪರಿಣಾಕಾರಿಯಾಗಿರುತ್ತವೆ. ಟ್ರಂಪ್ ಆಡಳಿತ ವೈಖರಿ ಕುರಿತಂತೆ ವಿಶ್ಲೇಷಣೆ ಮಾಡುವ ಮೊದಲು ಅವರ ಆರಂಭದ ಜೀವನ, ವಿದ್ಯಾರ್ಹತೆ, ರಾಜಕೀಯ ಹೆಜ್ಜೆ ಗುರುತುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು.
ಟ್ರಂಪ್ ಒಬ್ಬ ಯಶಸ್ವಿ ಉದ್ಯಮಿ. ಅಮೆರಿಕ ಸೇರಿದಂತೆ ವಿಶ್ವದ ಹಲವೆಡೆ ಇರುವ ಟ್ರಂಪ್ ಟವರ್‌ಗಳೇ ಇದನ್ನು ಸಾರಿ ಹೇಳುತ್ತವೆ ಎಂದರು.
ಆಟದಲ್ಲಿ ಜಯಗಳಿಸಲು ಒಬ್ಬ ಕ್ಯಾಪ್ಟನ್ ಇನ್ನಿತರ ಬುದ್ಧಿವಂತ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಂತೆ ಟ್ರಂಪ್ ಅವರೂ ತನ್ನ ತಂಡಕ್ಕೆ ಬುದ್ಧಿವಂತರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಮೂಲಕ ಪರಿಣಾಮಕಾರಿ ಆಡಳಿತ ಸುಧಾರಣೆ ತರಲು ಮುಂದಾಗಿದ್ದಾರೆ. ಟ್ರಂಪ್ ಕೈಗೊಂಡಿರುವ ವಲಸೆ ನೀತಿ, ಅಮೆರಿಕವೇ ಮೊದಲು, ನಾಗರಿಕ ಹಕ್ಕು ಸೇರಿದಂತೆ ಅವರ ಇತ್ತೀಚಿನ ರಾಜತಾಂತ್ರಿಕತೆ ಇದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.
ಈ ಮೊದಲು ವಲಸೆ ಬಂದ ಗರ್ಭಿಣಿಯರು ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿ, ಅಲ್ಲಿನ ಪೌರತ್ವ ಪಡೆಯುವ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದರು. ಇದಕ್ಕೂ ಈಗ ನಿಬರ್ಂಧ ಹೇರಿರುವ ಟ್ರಂಪ್, ಒಂದು ವೇಳೆ ಅಮೆರಿಕದ ಪೌರತ್ವ ಪಡೆಯಲೇಬೇಕೆಂದರೆ 5 ಮಿಲಿಯನ್ ಡಾಲರ್ ಪಾವತಿಸಿ, ಗೋಲ್ಡ್ ಕಾರ್ಡ್ ಪಡೆಯುವಂತೆ ತಾಕೀತು ಮಾಡಿದ್ದಾರೆ.
ಸೋವಿಯತ್ ಯೂನಿಯನ್ ವಿಸರ್ಜನೆಗೊಂಡ ನಂತರ ರೂಪುಗೊಂಡ ರಷ್ಯಾ ಹಾಗೂ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಚೈನಾ ಅಮೆರಿಕದ ಪ್ರಭುತ್ವಕ್ಕೆ ಸವಾಲಾಗಿವೆ. ಈ ಹಿನ್ನೆಲೆಯಲ್ಲಿ ಸಂಬಂಧ ಆಧಾರಿತ ವಿದೇಶಿ ರಾಜತಾಂತ್ರಿಕ ನೀತಿಯಲ್ಲಿ ಟ್ರಂಪ್ ಹಲವು ಮಾರ್ಪಾಡು ಮಾಡಿದ್ದು, ಇದು ಅವರ ಸೂಕ್ಷ್ಮ ಆಡಳಿತ ನೀತಿಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಗಣಪತಿ ಹೇಳಿದರು.
ಬದ್ಧತೆ ಪ್ರದರ್ಶಿಸಿವೆ: ಸಾಮಾಜಿಕ ಹೋರಾಟಗಾರ, ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ಅವರು, ಎರಡನೇ ವಿಶ್ವ ಮಹಾ ಯುದ್ಧದ ಪರಿಣಾಮ, ನ್ಯಾಟೊ ರಚನೆ, ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾದ ಶಿಥಿಲಾವಸ್ಥೆ ಬಗ್ಗೆ ವಿಶ್ಲೇಷಿಸಿದರು. 2ನೇ ಮಹಾಯುದ್ಧದ ನಂತರ ವಿವಿಧ ರಾಷ್ಟ್ರಗಳು ವಾಸ್ತವಿಕ ನೆಲೆಗಟ್ಟಿನಲ್ಲಿ ಜಾಗತಿಕವಾಗಿ ಆರು ಅಂಶಗಳಿಗೆ ಒತ್ತು ನೀಡಿವೆ.
ಜನಸಂಖ್ಯೆ ನಿಯಂತ್ರಣ, ಆರ್ಥಿಕ ಬೆಳವಣಿಗೆ, ಬಡತನ ನಿರ್ಮೂಲನೆ, ಯುದ್ಧ ಹಾಗೂ ಸಂಘರ್ಷಮುಕ್ತ ವಾತಾವರಣ, ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ವಾಣಿಜ್ಯ ಬೆಳವಣಿಗೆ, ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ಮುಕ್ತ ಮಾಡುವ ಕುರಿತಂತೆ ಬದ್ಧತೆ ಪ್ರದರ್ಶಿಸಿವೆ ಎಂದರು.
ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನ ನಿವೃತ್ತ ಜಂಟಿ ಕಾರ್ಯದರ್ಶಿ ರವಿ ಜೋಷಿ ಮಾತನಾಡಿ, ಜಾಗತಿಕ ಮಟ್ಟದಲ್ಲಿನ ವಿವಿಧ ಸವಾಲುಗಳ ಬಗ್ಗೆ ವಿಶ್ಲೇಷಣೆ ಮಾಡಿದರು. ಚರ್ಚಾಕೂಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಹಲವು ಗಣ್ಯರು ಭಾಗಿಯಾಗಿದ್ದರು.