ಬೀದರ್: ಇಲ್ಲಿನ ನ್ಯೂಟೌನ್ ಠಾಣೆ ಪಿಎಸ್ಐ ಎಲ್.ಟಿ. ಸಂತೋಷ ಅವರು 2018ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪದಕ ಪ್ರದಾನ ಮಾಡಿ, ಗೌರವಿಸಿದರು.
ಸಂತೋಷ ಅವರು ಹುಮನಾಬಾದ್ ಠಾಣೆಯಲ್ಲಿ 2018ರಲ್ಲಿ ಸಲ್ಲಿಸಿದ ಬೆಸ್ಟ್ ಸೇವೆಯಿಂದ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹುಮನಾಬಾದ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಬಲ್ ಮರ್ಡರ್, ಹೆದ್ದಾರಿ ದರೋಡೆ, ಅಕ್ರಮ ಗಾಂಜಾ ಸಾಗಣೆ, ಮನೆ ಕಳ್ಳತನ ಇತರ ಪ್ರಕರಣ ಭೇದಿಸುವಲ್ಲಿ ತೋರಿದ ಚಾಕಚಕ್ಯತೆ, ಆರೋಪಿಗಳ ಬಂಧನದ ಕೆಲಸಕ್ಕೆ ಸಿಎಂ ಮೆಡಲ್ ಗೌರವ ಸಂದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರುದನೂರ ಗ್ರಾಮದ ಸಂತೋಷ ಅವರು ಕೃಷಿ ಕುಟುಂಬದಿಂದ ಬಂದವರು. ಬಿಇ ಮೆಕ್ಯಾನಿಕಲ್ ಪದವೀಧರರಾದ ಇವರು 2010ರ ಬ್ಯಾಚ್ ಎಸ್ಐ ಪರೀಕ್ಷೆಯಲ್ಲಿ 98ನೇ ರ್ಯಾಂಕ್ ಪಡೆದರು. ಕೊಪ್ಪಳ ಜಿಲ್ಲೆ ತಾವರಗೇರಿ ಠಾಣೆಯಿಂದ ವೃತ್ತಿ ಜೀವನ ಆರಂಭಿಸಿದರು. ನಂತರ ಬೀದರ್ ನ ನ್ಯೂಟೌನ್, ಹುಮನಾಬಾದ್, ಕಲಬುರಗಿ ಜಿಲ್ಲೆಯ ಅಫಜಲಪುರ ಠಾಣೆ ನಂತರ ಇದೀಗ ಪುನಃ ನ್ಯೂಟೌನ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
34ರ ಹರೆಯದ ಸಂತೋಷ ಅವರದ್ದು ಡೈನಾಮಿಕ್ ಸ್ವಭಾವ. ಕೆಲಸ ಮಾಡಿದ ಠಾಣೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸರಳತೆ ಜತೆಗೆ ದಕ್ಷತೆಯಿಂದ ಕೆಲಸ ಮಾಡಿ ಹಲವು ಪ್ರಕರಣ ಯಶಸ್ವಿ ಬೇಧಿಸಿದ್ದಾರೆ. ಅಫಜಲಪುರದಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಅಲ್ಲಿನ ಠಾಣೆ ಹಸಿರುಮಯ ಮಾಡಿದ್ದ ಖ್ಯಾತಿ ಇವರಿಗಿದೆ. ಠಾಣೆ ಆವರಣದಲ್ಲಿ ಉದ್ಯಾನ ನಿರ್ಮಿಸಿ ಹೂಮಯವಾಗಿಸಿದ್ದಾರೆ. ವಿವಿಧ ಅಲಂಕಾರಿಕ ಹೂ ನೆಟ್ಟು ಸ್ವತಃ ನಿರ್ವಹಣೆ ಮಾಡಿದ್ದಾರೆ. ಇವರು ಕೆಲಸ ಮಾಡುತ್ತಿದ್ದ ವೇಳೆ ಹುಮನಾಬಾದ್ ಠಾಣೆಗೂ ಜಿಲ್ಲೆಯ ಬೆಸ್ಟ್ ಠಾಣೆ ಪ್ರಶಸ್ತಿ ಲಭಿಸಿತ್ತು.
ಪೊಲೀಸ್ ಇಲಾಖೆಯೇ ಬೆಸ್ಟ್
ಸಂತೋಷ ಅವರು ಬಿಇ ನಂತರ ಐಟಿ, ಬಿಟಿ ಕೆಲಸಕ್ಕೆ ಸೇರುವ ಚಿಂತನೆಯಲ್ಲಿದ್ದರು. ಆದರೆ ಈ ವೇಳೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಪಿಎಸ್ಐ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಈ ಪರೀಕ್ಷೆ ಸಿದ್ಧತೆ ಆರಂಭಿಸಿದರು. ಅರ್ಜಿ ಸಲ್ಲಿಸಿದ ವಾರದಲ್ಲೇ ಎರಡೂ ಪರೀಕ್ಷೆ ಬರೆದರು. ಅಬಕಾರಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದರೆ, ಪಿಎಸ್ಐನಲ್ಲಿ 98ನೇ ರ್ಯಾಂಕ್ ಪಡೆದರು. ಅಬಕಾರಿ ಬಿಟ್ಟು ನೇರ ಸಾರ್ವಜನಿಕರ ಸಂಪರ್ಕದಲ್ಲಿದ್ದು ಸೇವೆ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ಸೆಲ್ಯೂಟ್ ಹೇಳಿದರು. 2015, 2017ರಲ್ಲಿ ಸಂತೋಷ ಅವರು ಕೆಎಎಸ್ ಪರೀಕ್ಷೆ ಬರೆದು ಮೇನ್ಸ್ ನಲ್ಲೂ ಪಾಸಾಗಿದ್ದರು. ಆದರೆ ಮೌಖಿಕ ಸಂದರ್ಶನದಲ್ಲಿ ಹುದ್ದೆ ಕೈತಪ್ಪಿತು.
ಸಾರ್ವಜನಿಕರ ಸೇವೆ ಮಾಡುವ ಧ್ಯೇಯದಿಂದ ಪೊಲೀಸ್ ಇಲಾಖೆ ಸೇರಿರುವೆ. ಮುಖ್ಯಮಂತ್ರಿ ಮೆಡಲ್ ಬಂದಿರುವುದು ಖುಷಿ ತರುವ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಉತ್ತಮ ಕೆಲಸ ಮಾಡುವ ಹುಮ್ಮಸ್ಸು ನೀಡಿದೆ. ಎಲ್.ಟಿ. ಸಂತೋಷ, ಪಿಎಸ್ಐ ಬೀದರ್ ನ್ಯೂಟೌನ್