ಹಾಸನ: ಅರಕಲಗೂಡು ತಾಲೂಕು ಶಣವಿನಕುಪ್ಪೆ ಗ್ರಾಮದಲ್ಲಿ ಹಾಲಿನ ಡೇರಿ ನಿರ್ಮಾಣ ಸಂಬಂಧ ಒಂದೇ ಗ್ರಾಮದ ಎರಡು ಗುಂಪುಗಳ ನಡುವೆ ಪರ-ವಿರೋಧ ನಿಲುವು ಮುಂದುವರಿದಿದೆ.
ಇದೇ ವಿಷಯವಾಗಿ ಗುರುವಾರ ಗ್ರಾಮದ ಎರಡು ಗುಂಪುಗಳು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ತಮ್ಮ ನಿಲುವು, ವಸ್ತು ಸ್ಥಿತಿ ಹಂಚಿಕೊಂಡರು.
ಸ್ಥಳೀಯ ಗ್ರಾಪಂ ಸದಸ್ಯ ಸಂತೋಷ್ ಮಾತನಾಡಿ, ಸದರಿ ಜಾಗ ನಮ್ಮೂರಿನಲ್ಲಿರುವ ಈಶ್ವರ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳ ಕಾರ್ಯಕ್ರಮ ಅಥವಾ ಜಾತ್ರೆ ಮಾಡಲು ಇರುವುದು 30*108 ಅಳತೆಯ ಅದೊಂದೇ ಗ್ರಾಮ ಠಾಣಾ ಜಾಗ. ಆದರೆ ಅದನ್ನು ಪಿಡಿಒ ಏಕ ಪಕ್ಷೀಯವಾಗಿ ಡೇರಿಗೆ ಇ-ಖಾತಾ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಗ್ರಾಮಸ್ಥರ ಮನವಿಗೂ ಪುರಸ್ಕಾರ ಕೊಟ್ಟಿಲ್ಲ. ಬೇರೆ ಕಡೆಯಲ್ಲೂ ಡೇರಿ ಮಾಡಬಹುದು. ಆದರೆ ಯಾರದೋ ಕುಮ್ಮಕ್ಕಿನಿಂದ ವಿರೋಧವನ್ನು ಲೆಕ್ಕಿಸದೇ ಡೇರಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಅವ್ಯವಸ್ಥೆ, ಅಶುಚಿತ್ವ ಉಂಟಾದರೆ ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರ ವಿರೋಧದ ನಡುವೆಯೂ ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪ್ಪಣ್ಣ, ಸ್ವಾಮಿಗೌಡ ಇದ್ದರು
ಬಳಿಕ ಅದೇ ಗ್ರಾಮದ ಡೇರಿ ಕಾರ್ಯದರ್ಶಿ ಪ್ರಶಾಂತ್ ಮಾತನಾಡಿ, ಗ್ರಾಪಂ ಸದಸ್ಯ ಸಂತೋಷ್ ಮಾಡಿರುವ ಆರೋಪ ಶುದ್ಧ ಸುಳ್ಳು. ಸದರಿ ಜಾಗದಲ್ಲಿ ಡೇರಿ ಕಟ್ಟಡ ಕಟ್ಟಿದರೆ ತಮ್ಮ ಮನೆ ಮರೆಯಾಗಲಿದೆ ಮತ್ತು ಆ ಜಾಗವನ್ನು ತಮ್ಮಂತೆ ಮಾಡಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ. ಜಾತಿ ಸಂಘರ್ಷ ಎಂದು ಬಿಂಬಿಸಲು ಹೊರಟಿದ್ದಾರೆ. ನಾವು ಕಾನೂನು ಪ್ರಕಾರವೇ ನೂತನ ಡೇರಿ ನಿರ್ಮಾಣ ಮಾಡಲು ಹೊರಟಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚನ್ನಾಪ್ಪಾಜಿ, ಕುಮಾರ್, ಪುಟ್ಟಪ್ಪ ಇದ್ದರು.