ಜಿಲ್ಲೆ

ಡೆಂಘೆಯಿಂದ ಮಕ್ಕಳನ್ನು ರಕ್ಷಿಸಲು ಶಾಲೆಯ ಪ್ರತಿ ಕೊಠಡಿಯಲ್ಲಿ ಸೊಳ್ಳೆ ಬತ್ತಿ

ಹಾಸನ: ಜಿಲ್ಲೆ ಮತ್ತು ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಭಯ ಹುಟ್ಟಿಸಿರುವ ಡೆಂಘೆ ರೋಗ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಹಲವು ಮಕ್ಕಳು ಕಾಯಿಲೆಗೆ ಬಲಿಯಾಗಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಶಾಲಾ ಕೊಠಡಿಯಲ್ಲಿ ಸೊಳ್ಳೆಯಿಂದ ಮುಕ್ತಿ ನೀಡಲು ಸೊಳ್ಳೆ ಬತ್ತಿ ಹಚ್ಚುವುದು ಮತ್ತು ಶಾಲೆಯ ಆವರಣವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಡೆಂೆ ರೋಗದಿಂದ ಇದುವರೆಗೂ ಆರು ಮಕ್ಕಳು ಮೃತಪಟ್ಟಿದ್ದು ಇದರಲ್ಲಿ ಇಬ್ಬರು ಸರ್ಕಾರಿ ಶಾಲೆಯ ಮಕ್ಕಳು ಉಳಿದಂತೆ ನಾಲ್ವರು ಖಾಸಗಿ ಶಾಲೆಯ ಮಕ್ಕಳಾಗಿದ್ದಾರೆ. ಮಕ್ಕಳ ಸಾವಿನಿಂದ ಎಲ್ಲ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಧಿಕಾರಿಗಳು ಮತ್ತು ಮುಖ್ಯೋಪಾಧ್ಯಾಯರ ಜತೆ ಸಭೆ ನಡೆಸಿ ಏನೆಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಕೆ. ಪಾಂಡು ಅವರು ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಕ್ಕಳು ಪ್ರತಿನಿತ್ಯ ಪ್ರಾರ್ಥನೆಗೆ ತೆರಳುವ ಮುನ್ನ ಕೊಠಡಿಯಲ್ಲಿ ಸೊಳ್ಳೆ ಬತ್ತಿ ಹಚ್ಚಬೇಕು. ಪ್ರಾರ್ಥನೆ ಮುಗಿಸಿ ಬರುವಷ್ಟರಲ್ಲಿ ಬತ್ತಿಯ ವಾಸನೆಯಿಂದ ಸೊಳ್ಳೆಗಳನ್ನು ನಾಶ ಪಡಿಸುವುದು ಹಾಗೂ ಪ್ರತಿ ಕೊಠಡಿಯಲ್ಲಿ ಕೂಡ ಈ ರೀತಿ ಮಾಡುವಂತೆ ಸೂಚನೆ ನೀಡಲಾಗಿದೆ.
ಶಾಲೆಯ ಆವರಣದಲ್ಲಿ ಗಿಡ ಗಂಟೆ ಬೆಳೆದು ನೀರು ನಿಂತಿದ್ದರೆ ಗ್ರಾಮ ಪಂಚಾಯಿತಿ ನೆರವಿನಿಂದ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು ಮತ್ತು ಶಾಲೆಯ ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರು ಚರ್ಚಿಸಿ ಕುಡಿಯುವ ನೀರಿನ ಟ್ಯಾಂಕರ್, ಅಡುಗೆ ಕೋಣೆಯನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ. ಶಾಲೆಯ ಆವರಣದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಡೆಂೆ ನಿಯಂತ್ರಣದ ಮಾಹಿತಿ ಪ್ರಚಾರಕ್ಕೆ ವಿದ್ಯಾರ್ಥಿಗಳ ಮೂಲಕ ಪ್ರಾರ್ಥನಾ ಸಮಯದಲ್ಲಿ ಘೋಷಣೆಗಳನ್ನು ಹೇಳಿಸುವ ಕಾರ್ಯವನ್ನು ಮಾಡಬೇಕು ಎಂದು ಆದೇಶಿಸಲಾಗಿದೆ.
ಪ್ರತಿ ಶಾಲೆಯ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ಡೆಂೆ ಹಾಗೂ ಚಿಕೂನ್ ಗುನ್ಯಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿಯ ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ರಕ್ತ ಪರೀಕ್ಷೆ ಮಾಡಿಸುವಂತೆ ತಿಳಿಸಲಾಗಿದೆ.
ಇದಲ್ಲದೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲು ಸೊಳ್ಳೆಯ ಲಾರ್ವ ನಾಶ ಕುರಿತು ಮಾಹಿತಿಗಳನ್ನು ನೀಡುವುದು. ಭಾಷಣ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಯ ಮೂಲಕ ಅವರಿಗೆ ಜಾಗೃತಿ ಮೂಡಿಸಬೇಕು. ಹಿಂದುಳಿದ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳ ಒಳಗೆ ಮತ್ತು ಹೊರಗೆ ಆವರಣವನ್ನು ಸ್ವಚ್ಛತೆ ಕಾಪಾಡುವಂತೆ ಹಾಸ್ಟೆಲ್ ವಾರ್ಡನ್‌ಗಳಿಗೆ ಸೂಚನೆ ನೀಡಲಾಗಿದೆ.

ಅನೇಕ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ:
ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ಸಂಗ್ರಹವಾಗುವಂತಹ ಸ್ಥಳವನ್ನು ಶಾಲೆಯ ಆವರಣದಲ್ಲಿ ಸ್ವಚ್ಛ ಮಾಡಿಕೊಂಡಿಲ್ಲ. ಇನ್ನುಳಿದಂತೆ ನೀರಿನ ತೊಟ್ಟಿ, ಅಡುಗೆ ಕೋಣೆ ಹಾಗೂ ಆವರಣದಲ್ಲಿ ಪ್ಲಾಸ್ಟಿಕ್ ಲೋಟ ಹಾಗೂ ಇನ್ನಿತರೆ ವಸ್ತುಗಳಿಂದ ನೀರು ಸಂಗ್ರಹಣೆವಾಗಿ ಅಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದ ಶಾಲೆಗೆ ತೆರಳಿದ ಮಕ್ಕಳಿಗೆ ಹೆಚ್ಚು ರೋಗ ತಗುಲುತ್ತಿದೆ. ಇನ್ನುಳಿದಂತೆ ಶಾಲಾ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದುಕೊಂಡಿದ್ದು ಅಲ್ಲಿ ಮಕ್ಕಳು ಆಟವಾಡುವುದರಿಂದ ಸೊಳ್ಳೆಗಳು ಕಚ್ಚಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಆವರಣದ ಸುತ್ತ ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ.

44 ಮಕ್ಕಳಿಗೆ ಡೆಂಘೆ:
ಜಿಲ್ಲಾಸ್ಪತ್ರೆಯಲ್ಲಿ 44 ಮಕ್ಕಳಿಗೆ ಡೆಂಘೆ ಪತ್ತೆಯಾದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 5 ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಶಂಕಿತ ಡೆಂಘೆಯಿಂದ ಆರು ಮಕ್ಕಳು ಮೃತಪಟ್ಟಿದ್ದು, ಎರಡು ಮಕ್ಕಳು ಡೆಂಘೆನಿಂದ ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರ ವರದಿ ಬರಬೇಕಾಗಿದೆ. ಈಗಾಗಲೇ ಮುಂಜಾಗ್ರತ ಕ್ರಮವಾಗಿ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಬೆಡ್‌ಗಳನ್ನು ಮೀಸಲಿಡಲಾಗಿದೆ.