ಮಂಡ್ಯ: ಡೆಂಘೆ ಮತ್ತು ಮಲೇರಿಯಾ ರೋಗವನ್ನು ಜಿಲ್ಲೆಯಿಂದ ದೂರವಿರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಡೆಂಘೆ ದಿನಾಚರಣೆ ಮತ್ತು ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಂತರ ಇಲಾಖಾ ಸಮನ್ವಯ ಸಭೆಯಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಮಗೆ ಸೇರಿದ ಖಾಲಿ ಜಾಗದಲ್ಲಿರುವ ಟೈಯರ್, ಎಳನೀರಿನ ಚಿಪ್ಪು, ಮರದ ಪೊಟರೆ, ಹೂವಿನ ಕುಂಡಗಳಲ್ಲಿ, ಒಡೆದ ಬಾಟಲಿ, ಬಿಸಾಡಿದ ಪ್ಲಾಸ್ಟಿಕ್ ಲೋಟ, ಉಪಯೋಗಿಸದ ತೊಟ್ಟಿಗಳು, ಡ್ರಮ್‌ಗಳು, ಬ್ಯಾರೆಲ್‌ಗಳಲ್ಲಿ ನೀರು 3ಕ್ಕಿಂತ ಹೆಚ್ಚು ದಿನ ಸಂಗ್ರಹವಾದರೆ ರೋಗವಾಹಕ ಸೊಳ್ಳೆಗಳು ಉತ್ಪತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ನೀರು ನಿಲ್ಲದಂತೆ ಸರಿಯಾದ ರೀತಿಯಲ್ಲಿ ಸಾರ್ವಜನಿಕರು ವಿಲೇ ಮಾಡಿ ಸಹಕರಿಸಬೇಕು ಎಂದರು.
ಅಂಗನವಾಡಿ, ಶಾಲೆಗಳು, ವಸತಿ ನಿಲಯಗಳಲ್ಲಿ ನೀರು ಸಂಗ್ರಹಣೆಯಾಗದಂತೆ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ಗಮನ ಹರಿಸಬೇಕು. ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಮಳೆ ನೀರು ಸಂಗ್ರಹದಿಂದ ಡೆಂಘೆ, ಮಲೇರಿಯಾ ಈಗೆ ಅನೇಕ ಕಾಯಿಲೆಗಳು ಬರುವುದನ್ನು ತಡೆಗಟ್ಟಲು ಆರೋಗ್ಯ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಎಲ್ಲ ನೀರಿನ ತೊಟ್ಟಿಗಳು, ಡ್ರಮ್‌ಗಳು, ಬ್ಯಾರೆಲ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ತೊಳೆದು ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು. ನೀರನ್ನು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ, ಡ್ರಮ್‌ಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಮುಚ್ಚಳದಿಂದ ಮುಚ್ಚುವುದು. ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆಯನ್ನು ಬಳಸಬೇಕು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡಬೇಕು. ಎಲ್ಲರ ಸಹಭಾಗಿತ್ವದೊಂದಿಗೆ ಡೆಂಘೆಯನ್ನು ಸೋಲಿಸೋಣ ಹಾಗೂ ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ. ನವೀನ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸೋಣ ಎಂಬುದು ಇದರ ಘೋಷಣೆ ವಾಕ್ಯವಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಮಾನಸಿಕ ರೋಗ ತಜ್ಞ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ.ನಾಗರಾಜು, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್.ಶಶಿಧರ್, ಟಿಎಚ್‌ಒಗಳಾದ ಡಾ.ಜವರೇಗೌಡ, ಡಾ.ರವೀಂದ್ರ, ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ ಇತರರಿದ್ದರು.