ಬೆಂಗಳೂರು ಗ್ರಾಮಾಂತರ: ಮಳೆಗಾಲ ಆರಂಭವಾಗಿದ್ದು, ಸೊಳ್ಳೆಗಳಿಂದ ಹರಡುವ ಡೆಂಘೆ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆ ಚುರುಕುಗೊಳಿಸಿದೆ. ಇದರೊಂದಿಗೆ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದು, ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 19 ಡೆಂಘೆ ಹಾಗೂ 42 ಚಿಕೂನ್‌ಗುನ್ಯಾ ಪ್ರಕರಣ ಪತ್ತೆಯಾಗಿವೆ.
ಮೇ ನಲ್ಲಿ ಸೈಕ್ಲೋನ್ ಕಾರಣದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಿದ್ದು, ಮಳೆಗಾಲದಲ್ಲಿ ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ದೊಡ್ಡಮಟ್ಟದ ಜಾಗೃತಿ ಹಮ್ಮಿಕೊಂಡಿದೆ. ಮಳೆ ನೀರು ಸಂಗ್ರಹವಾಗುವ ತಾಣಗಳಲ್ಲಿ ಡೆಂಘೆ ಸೊಳ್ಳೆಯ ಸಂತಾನೋತ್ಪತ್ತಿ ತೀವ್ರಗೊಳ್ಳುವುದರಿಂದ ಮನೆಗಳ ಸುತ್ತಮುತ್ತಲ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾನ್ಯ ಜ್ವರವೆಂದು ಕಡೆಗಣಿಸಬೇಡಿ: ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ತಪಾಸಣೆಗೆ ಒಳಗಾಗಬೇಕು. ಸಾಮಾನ್ಯ ಜ್ವರವೆಂದು ಕಡೆಗಣಿಸಬಾರದು, ಮನೆಮದ್ದು ಪ್ರಯೋಗಕ್ಕೆ ಮುಂದಾಗಬಾರದು, ಡೆಂಘೆ, ಚಿಕೂನ್‌ಗುನ್ಯಾವನ್ನು ನಿರ್ಲಕ್ಷ್ಯ ಮಾಡಿದರೆ ಪ್ರಾಣಹಾನಿಯಾಗಬಹುದು ಎಂದು ವೈದ್ಯಾಕಾರಿಗಳು ತಿಳಿಸಿದ್ದಾರೆ.
ಮಳೆ ನಿಂತ ಮೇಲೆಯೇ ಆಪತ್ತು: ಜೋರು ಮಳೆ ಸುರಿಯುವ ವೇಳೆ ಡೆಂಘೆ ಸಂತಾನೋತ್ಪತ್ತಿ ಸಾಧ್ಯವಾಗುವುದಿಲ್ಲ, ಆದರೆ ಮಳೆ ನಿಂತ ಕೆಲ ದಿನದ ಬಳಿಕ ಡೆಂಘೆ ಬೆಳವಣಿಗೆ ತೀವ್ರಗೊಳ್ಳುತ್ತದೆ. ಬಿಟ್ಟು ಬಿಟ್ಟು ಮಳೆ ಸುರಿಯುವ ಕಾಲದಲ್ಲಿ ಡೆಂಘೆ ಉಲ್ಬಣ ಸಾಧ್ಯತೆ ಹೆಚ್ಚಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಮಳೆ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗುತ್ತದೆ. ಆದ್ದರಿಂದ ತೆಂಗಿನ ಚಿಪ್ಪು, ಟಯರ್‌ಗಳು, ಬಾಟಲಿ, ಪ್ಲಾಸ್ಟಿಕ್ ಕವರ್ ಹೀಗೆ ಮಳೆ ನೀರು ಸಂಗ್ರಹವಾಗುವ ಸ್ಥಳಗಳತ್ತ ಎಚ್ಚವಹಿಸಬೇಕು.
ರಕ್ತ ಕಣಗಳು ತಗ್ಗಿದರೆ ಅಪಾಯ: ಜ್ವರ, ಮೈಕೈ ನೋವು ಈ ಕಾಯಿಲೆಗಳ ಪ್ರಮುಖ ಲಕ್ಷಣವಾಗಿವೆ. ಜಿಲ್ಲೆಯ ನಾಲ್ಕೂ ತಾಲೂಕಿನ ಎಲ್ಲ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಡೆಂಘೆ, ಚಿಕೂನ್‌ಗುನ್ಯಾ ಪರೀಕ್ಷೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು, ಸೋಂಕು ತಗುಲಿದ ವ್ಯಕ್ತಿಯಲ್ಲಿ ವೇಗವಾಗಿ ಬಿಳಿ ರಕ್ತಕಣಗಳು ತಗ್ಗುವುದರಿಂದ ವಿಳಂಬ ಮಾಡಿದರೆ ಪ್ರಾಣಾಪಾಯ ಸಂಭವಿಸುತ್ತದೆ ಎಂದು ವೈದ್ಯಾಕಾರಿಗಳು ತಿಳಿಸಿದ್ದಾರೆ.
ಈ ಸೋಂಕು ಹಗಲಿನಲ್ಲಿ ಕಚ್ಚುವ ಸೊಳ್ಳೆಗಳಿಂದ ಹರಡುವುದರಿಂದ ಸಾರ್ವಜನಿಕರು ಸೊಳ್ಳೆಕಾಯಿಲ್, ಸೊಳ್ಳೆಪರದೆ ಬಳಸಬೇಕು, ಮುಖ್ಯವಾಗಿ ಹಿರಿಯರು ಹಾಗೂ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮನೆಗಳಲ್ಲಿನ ಸಂಪ್‌ಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ನೀರು ಶೇಖರಣೆ ಡ್ರಮ್‌ಗಳನ್ನು ತೆರೆದ ಸ್ಥಿತಿಯಲ್ಲಿ ಇಡಬಾರದು, ನೀರು ಶೇಖರಣೆ ವಸ್ತುಗಳನ್ನು ಸ್ವಚ್ಛಗೊಳಿಸಿ ಒಣಗಿಸಿದ ಬಳಿಕ ಉಪಯೋಗಿಸುವುದು ಉತ್ತಮ ಎಂಬುದು ವೈದ್ಯರ ಸಲಹೆಯಾಗಿದೆ.
ಜನವರಿಯಿಂದ ಇದುವರೆಗಿನ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 19 ಡೆಂಘೆ ಹಾಗೂ 42 ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಸಾಂಕ್ರಾಮಿಕ ರೋಗ ತಡೆಗೆ ದೊಡ್ಡಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ, ಸೊಳ್ಳೆ ಲಾರ್ವಾ ಪರೀಕ್ಷೆ ಚುರುಕುಗೊಳಿಸಲಾಗಿದೆ, ಯಾವುದೇ ರೋಗ ಲಕ್ಷಣ ಕಂಡರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಡಾ.ಧರ್ಮೇಂದ್ರ, ಜಿಲ್ಲಾ ಮಲೇರಿಯಾ ಅಕಾರಿ