ಜಿಲ್ಲೆ

ಡೆಂಘೆ, ಚಿಕೂನ್ ಗುನ್ಯಾ ವ್ಯಾಪಕ ಹಿನ್ನೆಲೆ ಸಹಾಯವಾಣಿ

ಕಲಬುರಗಿ: ಜಿಲ್ಲೆಯಲ್ಲಿ ಡೆಂಘೆ ಹಾಗೂ ಚಿಕೂನಗುನ್ಯಾ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆ ೬೩೬೩೧೫೨೨೯೫ಗೆ ಕರೆ ಮಾಡಿ ಡೆಂಘೆ ಮತ್ತು ಚಿಕೂನ್ ಗುನ್ಯಾ ಜ್ವರದ ಬಗ್ಗೆ ಸಲಹೆ ಪಡೆದುಕೊಳ್ಳಬಹುದು. ಈ ರೋಗ ಹತೋಟಿಗೆ ತರಲು ಸೊಳ್ಳೆಗಳ ನಿಯಂತ್ರಣವೇ ಮದ್ದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಮೆಂಟ್ ತೊಟ್ಟಿ, ಕಲ್ಲು ಚಿಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್, ಬ್ಯಾರಲ್, ಮಣ್ಣಿನ ಮಡಿಕೆ, ಬಳಕೆ ಮಾಡದಿರುವ ಒರಳು ಕಲ್ಲು, ಬಿಸಾಡಿದ ಖಾಲಿ ಟೆಂಗಿನ ಚಿಪ್ಪು, ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಶೇಖರಣೆಯಾಗುವ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗುವುದರಿಂದ ಇಲ್ಲಿ ಈಡೀಸ್ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಮುಖ್ಯವಾಗಿ ನೀರು ನಿಲ್ಲದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ ಎಂದಿದ್ದಾರೆ.
ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್ ವಾರಕ್ಕೊಮ್ಮೆ ಖಾಲಿ ಮಾಡಿ ಬ್ರಷ್ ಅಥವಾ ತೆಂಗಿನ ಗುಂಜಿನಿAದ ತಿಕ್ಕಿ ತೊಳೆದು ಒಣಗಿಸಿರಬೇಕು. ನೀರು ಖಾಲಿ ಮಾಡಲು ಸಾಧ್ಯವಿರದ ತೊಟ್ಟಿಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಮುಚ್ಚಳದಿಂದ ಮುಚ್ಚುವುದು ಅವಶ್ಯಕ ಎಂದಿದ್ದಾರೆ. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರ್, ಎಳೆ ನೀರಿನ ಚಿಪ್ಪು, ಒಡೆದ ಬಾಟಲಿಗಳಲ್ಲಿ ಮಳೆ ನೀರು ಸಂಗ್ರಹವಾಗದAತೆ ಎಚ್ಚರವಹಿಸಬೇಕು. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ನೀರು ಸರಾಗವಾಗಿ ಸಾಗುವಂತೆ ನೋಡಿಕೊಳ್ಳಬೇಕು. ಘನತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿಸಾಡದೆ ಸೂಕ್ತ ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.