ಜಿಲ್ಲೆ

ಡೆಂಘಿ, ಚಿಕೂನ್ ಗುನ್ಯಾ ಜ್ವರದ ಬಗ್ಗೆ ಇರಲಿ ಎಚ್ಚರ: ರೋಗದಿಂದ ಪಾರಾಗಲು ಕ್ರಮಗಳ

ಹಾಸನ: ಮಳೆಯಿಂದ ಹಾಗೂ ನೀರಿನ ಸಂಗ್ರಹಣೆ ಅಸಮರ್ಪಕ ನಿರ್ವಹಣೆಯಿಂದ ಡೆಂಘಿ ಮತ್ತು ಚಿಕೂನ್ ಗುನ್ಯಾ ಹರಡುವ ಈಡೀಸ್ ಸೊಳ್ಳೆಗಳ ಉತ್ಪತ್ತಿಯು ಹೆಚ್ಚಾಗಿ, ಜಿಲ್ಲೆಯಲ್ಲಿ ಡೆಂಘಿ ಜ್ವರ ಪ್ರಕರಣಗಳ ಸಂಖ್ಯೆ ಉಲ್ಬಣಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ನೀಡಿರುವ ಮುನ್ನೆಚ್ಚರಿಕೆಯ ಪ್ರಕಾರ 2023 ಡೆಂಘಿ ಯುಗವಾಗಿ ಹೊರಹೊಮ್ಮುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಯ ಜತೆಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಡೆಂಘಿ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರವೂ ಸಹ ಮಹತ್ವದ್ದಾಗಿದೆ. ಆದ್ದರಿಂದ ಸಾರ್ವಜನಿಕರು ಅಗತ್ಯ ಕ್ರಮಗಳನ್ನು ಅನುಸರಿಸಿ ಡೆಂಘಿ ಜ್ವರ ಮತ್ತು ಚಿಕೂನ್ ಗುನ್ಯಾ ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಡೆಂಘಿ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಅದರಲ್ಲಿ ನಾಲ್ಕು ತರಹದ ವೈರಸ್‌ಗಳು ಇವೆ. ಹೀಗಾಗಿ ಮತ್ತೆ ಮತ್ತೆ ಡೆಂಘಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ ಹಾಗೂ ಒಮ್ಮೆ ಸೋಂಕಿತ ಸೊಳ್ಳೆಯು ತನ್ನ ಜೀವತಾವಧಿಯಲ್ಲಿ ಸೋಂಕನ್ನು ಹರಡುವುದಲ್ಲದೇ ತನ್ನ ಮುಂದಿನ ಪೀಳಿಗೆಗೂ ಹರಡುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿಷಕ್ರೆಿಯೆಗೊಳಿಸುವುದೇ ರೋಗ ನಿಯಂತ್ರಣದ ಪ್ರಮುಖ ಮಾರ್ಗವಾಗಿದೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ.

ಮುನ್ನೆಚ್ಚರಿಕೆ ಕ್ರಮಗಳು

ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆಯು ಮನೆಯ ಒಳಗೆ ಹಾಗೂ ಹೊರಗೆ ಸಂಗ್ರಹಣೆಗೊಂಡ ಶುದ್ಧ ನೀರಿನ ಸಂಗ್ರಹಣೆಗಳಲ್ಲಿ ಉತ್ಪತ್ತಿಯಾಗುವುದರಿಂದ ಪ್ರತಿ ಎರಡು ದಿನಕ್ಕೊಮ್ಮೆ ಎಲ್ಲಾ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ, ನೀರು ಶೇಖರಿಸಿ ಸೊಳ್ಳೆ ನುಸುಳದಂತೆ ಮುಚ್ಚಿಡಬೇಕು. ಸಿಮೆಂಟ್ ತೊಟ್ಟಿ, ಡ್ರಂ, ಬ್ಯಾರೆಲ್, ಹೂ ಕುಂಡಗಳ ಕೆಳಗಿನ ತಟ್ಟೆಗಳು, ಏರ್ ಕೂಲರ್, ಫ್ರಿಡ್ಜ್‌ನ ಡಿ-ಫ್ರಾಸ್ಟ್ ಟ್ರೇ ಗಳಲ್ಲಿ, ಮನೆಯ ಸುತ್ತ ಬಿಸಾಡಿದ ಒಡೆದ ಬಾಟೆಲ್, ಟೈರ್, ಪ್ಲಾಸ್ಟಿಕ್ ಕಪ್, ಎಳನೀರ ಚಿಪ್ಪು, ಒರಳು ಕಲ್ಲು ಇತ್ಯಾದಿ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆಯ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಈಡೀಸ್ ಲಾರ್ವಾ ಸಮೀಕ್ಷೆ ಸಲುವಾಗಿ ಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ರೋಗ ಲಕ್ಷಣಗಳು

ಇದ್ದಕ್ಕಿದ್ದಂತೆ ಜ್ವರ, ಕಣ್ಣಿನ ಹಿಂಭಾಗದ ನೋವು, ತಲೆನೋವು, ರಕ್ತಸ್ರಾವ ಈ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆಯನ್ನು ಪಾಲಿಸದೇ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಡೆಂಘಿ ಜ್ವರ ಲಕ್ಷಣಗಳಿದ್ದಲ್ಲಿ ಬ್ರೂಫಿನ್ ಅಥವಾ ಇತರೆ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆ ಇದೆ. ಜ್ವರ ಪೀಡಿತರು ಸಾಕಷ್ಟು ಆಹಾರ ಸೇವಿಸುವುದು ಮತ್ತು ಅಗತ್ಯ ವಿಶ್ರಾಂತಿ ಪಡೆಯಬೇಕು.

ಹಗಲು ಹೊತ್ತಿನಲ್ಲಿ ನಿದ್ರಿಸುವ, ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು, ವಯಸ್ಸಾದವರು ಹಾಗೂ ಇತರೇ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ಹೆಚ್ಚಾಗಿ ಡೆಂಘಿ ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅವರು ಹಗಲು ಹೊತ್ತಿನಲ್ಲಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸಿಕೊಳ್ಳಬೇಕು. ಯಾವಾಗಲೂ ಮೈತುಂಬ ಬಟ್ಟೆ ಧರಿಸಿ ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.