ಬಾಗಲಕೋಟೆ: ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಿದ್ದು, ಡೆಂಗಿ ರೋಗ ತಡೆಗಟ್ಟಲು ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆಯೊಂದಿಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೂನ್ ತಿಂಗಳಲ್ಲಿ ಮಳೆ ಆರಂಭವಾಗಿರುವದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಡೆಂಗಿ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೊಳ್ಳೆಗಳನ್ನು ನಾಶಮಾಡಲು ಕೀಟನಾಶಕ ಸಿಂಪಡಿಸಿ ದಿನನಿತ್ಯ ಸೊಳ್ಳೆ ಪರದೆಯನ್ನು ಉಪಯೋಗಿಸುವದರಿಂದ ಮಾರಕ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ನೀರು ಶೇಖರಣೆಯಾಗುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಕ್ರಮವಹಿಸಬೇಕು. ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದರ ಜೊತೆಗೆ ಶೀಘ್ರ ಹಾಗೂ ಸೂಕ್ತ ವಿಲೇವಾರಿಗೆ ಕ್ರಮವಹಿಸಲು ತಿಳಿಸಿದ ಶಿನ್ನಾಳಕರ ಅವರು ಮಳೆ ನೀರು ನಿಲ್ಲದಂತೆ ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚತಕ್ಕದ್ದು. ಸಾರ್ವಜನಿಕ ನಲ್ಲಿ ಹಾಗೂ ಕೊಳವೆ ಬಾವಿಗಳಿಂದ ಹೆಚ್ಚುವರಿ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿಗಳಲ್ಲಿ ಇರುವ ಹೂಳನ್ನು ಸ್ವಚ್ಚಗೊಳಿಸಲು ತಿಳಿಸಿದರು.
ಮನೆಯ ಒಳಗಡೆ ಗೋಡೆ, ಬಾಗಿಲುಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸುವದರಿಂದ ಸೊಳ್ಳೆ ಸಾಯುತ್ತವೆ. ಕೀಟನಾಶಕ ಸಿಂಪರಣಾ ಕಾರ್ಯಕರ್ತರು ನಿಮ್ಮ ಮನೆಗೆ ಬಂದಾಗ ತಪ್ಪದೇ ಎಲ್ಲ ಕೋಣೆಗಳಿಗೆ ಕೀಟನಾಶಕ ಸಿಂಪರಣೆ ಮಾಡಿಸಬೇಕು. ಸೊಳ್ಳೆ ಪರದೆ ದಿನನಿತ್ಯ ಉಪಯೋಗಿಸಿ, ಸೊಳ್ಳೆ ಕಡಿತದಿಂದ ಹರಡುವ ರೋಗಗಳಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಗಲು ಹೊತ್ತಿನಲ್ಲಿ ಸಹ ಮನೆಯಲ್ಲಿ ಮಲಗಿರುವ ಮಕ್ಕಳು, ಗರ್ಭಿಣಿಯರು, ವಯೋವೃದ್ದರು ಹಾಗೂ ರೋಗಿಗಳು ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು ಎಂದರು.
ಕೀಟಜನ್ಯ ರೋಗ ನಿಯಂತ್ರಣ ಕಾರ್ಯದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್, ನಗರಾಭಿವೃದ್ದಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೈಗಾರಿಕಾ ಇಲಾಖೆಗಳ ಪಾತ್ರ ಮುಖ್ಯವಾಗಿದೆ. ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ 569 ಸಂಶಯಾಸ್ಪದ ವ್ಯಕ್ತಿಗಳ ಪೈಕಿ 507 ವ್ಯಕ್ತಿಗಳ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ 42 ಪ್ರಕರಣಗಳು ಖಚಿತಪಟ್ಟಿದ್ದವು. ಅವರೆಲ್ಲರೂ ಈಗ ಗುಣಮುಕರಾಗಿದ್ದಾರೆ. ಅಲ್ಲದೇ ಜೂನ್ ಮಾಹೆಯಲ್ಲಿ 6 ಡೆಂಗಿ ಪ್ರಕರಣ ಕಂಡುಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಪ್ರಕರಣ ಪುನರಾವರ್ತಿತಗೊಳ್ಳದಂತೆ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಡೆಂಗಿ, ಚಿಕನಗುನ್ಯಾ, ಮಲೇರಿಯಾ ಪ್ರಕರಣಗಳು ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೊಳ್ಳೆ ಪರದೆ ನೀಡಲಾಗಿದೆ. ಕೀಟನಾಶಕ ಸಿಂಪರಣೆ, ಸೊಳ್ಳೆ ಪರದೆ ವಿತರಣೆ, ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ಮತ್ತು ಲಾರ್ವಾಗಳ ನಿಯಂತ್ರಣ, ನೀರಿನ ತಾಣಗಳ ಸಮೀಕ್ಷೆ, ಅಂತಹ ಸ್ಥಳಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ವಿಕಾಸ ಅವರು ಡೆಂಗಿ ರೋಗದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಸಭೆಯಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾರ ಮಾಗಿ, ಜಿಲ್ಲಾ ಸಮೀಕ್ಷಣಾಧಿಕಾರಿ ದಯಾನಂದ ಕರೆನ್ನವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಸುವರ್ಣ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.