ಹೊಸಪೇಟೆ: ಹಂಪಿ ಉತ್ಸವ ಅಂಗವಾಗಿ ಕಮಲಾಪುರ ಕೆರೆಯಲ್ಲಿ ಆಯೋಜಿಸಲಾಗಿರುವ ದೋಣಿ ವಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಗುರುವಾರ ಚಾಲನೆ ನೀಡಿದರು.
ನಂತರ ಅಧಿಕಾರಿಗಳೊಂದಿಗೆ ಮೋಟಾರ್ ಬೋಟ್‌ನಲ್ಲಿ ಕುಳಿತು ಕಮಲಾಪುರ ಕೆರೆಯ ಸೌಂದರ್ಯ ಆಸ್ವಾದಿಸಿದರು. ಸ್ವತಃ ಜಟ್‌ಸ್ಕೀ ಸ್ಕೂಟರ್ ಚಲಾಯಿಸಿ ಜಲಕ್ರೀಡೆ ಸಾಹಸ ಮೆರೆದರು.
ಐತಿಹಾಸಿಕ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಉತ್ಸವದ ಮೂರು ದಿನಗಳ ಕಾಲ ಕಮಲಾಪುರ ಕೆರೆಯಲ್ಲಿ ಬೋಟಿಂಗ್ ಪ್ರಯಾಣದ ಆನಂದ ಪಡೆಯಬಹುದು. ರಾಷ್ಟ್ರಕವಿ ಕುವೆಂಪು ವಿರಚಿತ ‘ದೋಣಿ ಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ’ ಎಂಬ ಕವನದ ಸಾಲುಗಳಂತೆ ಕಮಲಾಪುರ ಕೆರೆಯ ಕೆನ್ನೀರಿನಲ್ಲಿ ಬೋಟಿಂಗ್ ನಡೆಸುವುದು ಒಂದು ವಿಶಿಷ್ಟ ಅನುಭವವಾಗಲಿದೆ. ಕೆರೆಯ ತೆರೆಗಳ ಮೇಲೆ ಬೋಟ್, ಮೋಟಾರ್ ಶಬ್ದದೊಂದಿಗೆ ವೇಗವಾಗಿ ಚಲಿಸಿದರೆ ‘ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ’ ಎನ್ನುವ ಕವನದ ಸಾಲು ನಿಜವಾದಂತೆ ಭಾಸವಾಗುತ್ತದೆ. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ದೋಣಿ ವಿಹಾರದ ವಿಶಿಷ್ಠ ಅನುಭವ ತಮ್ಮದಾಗಿಸಿಕೊಳ್ಳಬಹದು.
ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಎಸ್ಪಿ ಬಿ.ಎಲ್.ಹರಿಬಾಬು, ಉಪವಿಭಾಗಿಯಾಧಿಕಾರಿ ವಿವೇಕನಂದ, ತಹಸೀಲ್ದಾರ್ ಶೃತಿ ಮಾಳಪ್ಪ ಗೌಡ್ರ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲೇಶ್ ಇತರರಿದ್ದರು.