ಜಿಲ್ಲೆ

ಡೀಸೆಲ್ ಕಳವು ಆರೋಪಿಗಳ ಬಂಧನ ಶೀಘ್ರ, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾಹಿತಿ, ಜಿಗಣಿ ಕೈಗಾರಿಕಾ ಪ್ರದೇಶ ಪರಿಶೀಲನೆ

ಆನೇಕಲ್: ನಿಲ್ಲಿಸಿದ್ದ ಲಾರಿಗಳಲ್ಲಿ ಡೀಸೆಲ್ ಕಳವು ಮಾಡುತ್ತಿದ್ದ ತಂಡವನ್ನು ಭಾನುವಾರ ಸಿನೀಮಿಯ ರೀತಿಯಲ್ಲಿ ಗುಂಡು ಹಾರಿಸಿ ಬಂಧಿಸಿದ ಪ್ರಕರಣದ ವಿಚಾರವಾಗಿ ಜಿಗಣಿಯ ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಆಸ್ಪತ್ರೆಗೆ ತೆರಳಿ ಆರೋಪಿಗಳ ದಾಳಿಯಿಂದ ಗಾಯಗೊಂಡಿದ್ದ ಪೊಲೀಸ್ ಪೇದೆ ಕೊಟ್ರೇಶಿ ಅವರ ಆರೋಗ್ಯ ವಿಚಾರಿಸಿದರು.

ಡೀಸೆಲ್ ಕಳ್ಳತನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಕಿರಣ್‌ನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು.

ಭಾನುವಾರ ಬೆಳಗಿನ ಜಾವ ಡೀಸೆಲ್ ಕಳವು ಮಾಡುತ್ತಿದ್ದವರನ್ನು ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿಗಳು ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದರು. ಆದರೂ ಜೀವದ ಹಂಗು ತೊರೆದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಜಿಗಣಿ ಇನ್‌ಸ್ಪೆಕ್ಟರ್ ಸುದರ್ಶನ್, ಗಾಯಗೊಂಡಿರುವ ಪಿ.ಸಿ.ಕೋಟ್ರೆಶ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.

ಆರೋಪಿಗಳು ಬಳಸುತ್ತಿದ್ದ ವಾಹನದಲ್ಲಿ ಕಲ್ಲು, ದೊಣ್ಣೆ, ಮಚ್ಚುಗಳಂತಹ ಮಾರಕಾಸ್ತ್ರ ಇಟ್ಟುಕೊಂಡಿದ್ದರು. ಅವರನ್ನು ಬಂಧಿಸಲು ಹೋದವರ ಮೇಲೆ ಹಲ್ಲೆ ಮಾಡುವ ಎಲ್ಲ ತಯಾರಿ ಮಾಡಿಕೊಂಡಿದ್ದ ವಿಚಿತ್ರ ಗ್ಯಾಂಗ್ ಇದು. ಹಾಗಾಗಿ ಕೂಡಲೇ ಜಾಲವನ್ನು ಭೇದಿಸುತ್ತೇವೆ ಎಂದು ಹೇಳಿದರು.

ಎಎನ್‌ಕೆ ಕ್ರೈಂ: ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ್ದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸ್ಥಳ ಪಡಿಶೀಲಿಸಿದರು. ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್, ಆನೇಕಲ್ ಉಪ ವಿಭಾಗದ ಮಲ್ಲೇಶ್, ಅತ್ತಿಬೆಲೆ ಇನ್‌ಸ್ಪೆಕ್ಟರ್ ವಿಶ್ವನಾಥ್, ಜಿಗಣಿ ಇನ್‌ಸ್ಪೆಕ್ಟರ್ ಸುದರ್ಶನ್ ಉಪಸ್ಥಿತರಿದ್ದರು.