ಹುಣಸೂರು: ನಗರದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಆಸ್ಪತ್ರೆ ಡಿಸೆಂಬರ್ ಅಂತ್ಯಕ್ಕೆ ಕಾರ್ಯಾರಂಭಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಭರವಸೆ ನೀಡಿದರು.
ನಗರದ ಹುಣಸೂರು-ಮಡಿಕೇರಿ ಬೈಪಾಸ್ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾಮಗಾರಿ 2018ರಲ್ಲಿ ಆರಂಭಿಸಲಾಗಿತ್ತು. ಕೆಲ ಸ್ಥಳೀಯ ಒತ್ತಡಗಳಿಂದಾಗಿ 100 ಹಾಸಿಗೆ ಬದಲಾಗಿ 135 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಆದ್ದರಿಂದಾಗಿ ನಿಗದಿತ ಮೊತ್ತ 25 ಕೋಟಿ ರೂ.ಗಳಿಗಿಂತ ಹೆಚ್ಚುವರಿ 7 ಕೋಟಿ ರೂ. ಕೊರತೆ ಉಂಟಾಗಿದೆ ಎಂದು ತಿಳಿಸಿದರು.
ನಿರ್ಮಾಣ ಕಾಮಗಾರಿ ವೆಚ್ಚ ಹೆಚ್ಚಾದ ಕಾರಣ ಆಸ್ಪತ್ರೆಗೆ ಅವಶ್ಯಕವಾದ ಕೆಲ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಪೈಕಿ ನೀರಿನ ಸಂಪ್, ಲಿಫ್ಟ್, ಕಾಂಪೌಂಡ್, ಆಸ್ಪತ್ರೆ ಆವರಣದಲ್ಲಿನ ರಸ್ತೆಗಳ ನಿರ್ಮಾಣ ಸೇರಿ ಅತ್ಯಗತ್ಯ ಸೌಲಭ್ಯ ಕೈಬಿಡಲಾಗಿದೆ ಎಂಬುದು ಪರಿಶೀಲನೆ ವೇಳೆ ತಮ್ಮ ಗಮನಕ್ಕೆ ಬಂದಿದ್ದು, ಹೆಚ್ಚುವರಿ 7 ಕೋಟಿ ರೂ. ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು. ಅಲ್ಲದೇ ಆಸ್ಪತ್ರೆಗೆ ಅವಶ್ಯವಿರುವ 2 ಕೋಟಿ ರೂ. ವೆಚ್ಚದ ನೂತನ ಉಪಕರಣಗಳನ್ನು ಶೀಘ್ರ ಸರಬರಾಜು ಮಾಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆಸ್ಪತ್ರೆ ಕಾರ್ಯಾರಂಭಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ತಾಯಿ ಮಗು ಆರೈಕೆ ಕೇಂದ್ರ: ನಗರದಲ್ಲಿರುವ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ಜಾಗದಲ್ಲಿ 30 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಗು ಆರೈಕೆ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, ಅಗತ್ಯ ಅನುದಾನ ನೀಡಲಾಗುವುದು. ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹೆರಿಗೆ ಆಗುವ ಪ್ರದೇಶವೆಂದು ಗುರುತಿಸಲಾಗಿದ್ದು, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿದ್ದರೂ ಮೂಲಸೌಕರ್ಯ ಒದಗಿಸಲಿಲ್ಲ ಎಂಬ ದೂರು ಬಂದಿದೆ. ಅತಿ ಹೆಚ್ಚು ಹೆರಿಗೆ ಆಗುವ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದಲ್ಲಿ ಸ್ವಾಭಾವಿಕವಾಗಿಯೇ ರಾಷ್ಟ್ರೀಯ ಕಾರ್ಯಕ್ರಮದಡಿ ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಡಿಸೆಂಬರ್ ಅಂತ್ಯಕ್ಕೆ ಆಸ್ಪತ್ರೆ ಕಾರ್ಯಾರಂಭಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸದನದಲ್ಲಿ ಈ ಕುರಿತಾಗಿ ತಮ್ಮ ಪ್ರಶ್ನೆಗೆ ಸಚಿವರು ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಪರಿಶೀಲಿಸಿ ಒಳ್ಳೆಯ ಸುದ್ದಿ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಕೇಂದ್ರ ಸರ್ಕಾರದ ಅನುದಾನದಡಿ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು. ಹುಡಾ ಅಧ್ಯಕ್ಷ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದ ಕುಮಾರ್, ವೀರೇಶ್ ರಾವ್ ಬೋಬಡೆ, ನಗರಸಭಾ ಸದಸ್ಯರಾದ ಸ್ವಾಮಿಗೌಡ, ಜಬೀ ಉಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಇದ್ದರು.