ಜಿಲ್ಲೆ

ಡಿಸಿಸಿಬಿಗೆ ₹ 7.17 ಕೋಟಿ ಲಾಭ

ಬೀದರ್: ಇಲ್ಲಿನ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ಗೆ 2019-20ನೇ ಸಾಲಿನಲ್ಲಿ 7.17 ಕೋಟಿ ರೂ. ನಿವ್ವಳ ಲಾಭವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಬ್ಯಾಂಕ್ನ 98ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಕಳೆದ ಮಾರ್ಚ್ ಅಂತ್ಯಕ್ಕೆ 1796.28 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 3212.01 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಘೋಷಣೆಯಂತೆ ಸಹಕಾರ ಸಂಘ, ಬ್ಯಾಂಕ್ ಕೆಲಸ ಮಾಡಬೇಕು. ಬ್ಯಾಂಕ್ ಶತಮಾನೋತ್ಸವ ಆಚರಣೆ ಹೊಸ್ತಿಲಲ್ಲಿದ್ದು, ಈ ಸಂದರ್ಭದಲ್ಲಿ ಠೇವಣಿ ಸಂಗ್ರಹ 3000 ಕೋಟಿ ರೂ. ಗುರಿ ಸಾಧಿಸಲು, ದುಡಿಯುವ ಬಂಡವಾಳ 5000 ಕೋಟಿ ರೂ. ಹೊಂದಲು ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.

ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ್, ಎಲ್ಲ ನಿರ್ದೇಶಕರು, ಸಿಇಒ ಮಹಾಜನ ಮಲ್ಲಿಕಾರ್ಜುನ, ಜಿಎಂಗಳಾದ ವಿಠಲ್ ರೆಡ್ಡಿ ಎಡಮಲ್ಲೆ, ಚನ್ನಬಸಯ್ಯ ಸ್ವಾಮಿ ಇತರರಿದ್ದರು. ಬಸವರಾಜ ಕಲ್ಯಾಣ ನಿರೂಪಣೆ ಮಾಡಿದರು.