ಜಿಲ್ಲೆ

ಡಿಸಿಸಿ ಬ್ಯಾಂಕ್‌ನಿಂದ ಆರ್ಥಿಕ ಚೈತನ್ಯ

ಶಿಡ್ಲಘಟ್ಟ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ (ಡಿಸಿಸಿ) ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಮಳ್ಳೂರು ಬಳಿಯ ಸಾಯಿಬಾಬಾ ಮಂದಿರದ ಆವರಣದಲ್ಲಿ ಮಂಗಳವಾರ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸುಮಾರು 31 ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿದರು.

ಸಂಕಷ್ಟದಲ್ಲಿ ಜನರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್‌ನಿಂದ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಸಾಲಕ್ಕೆ ಬಡ್ಡಿ ಕಟ್ಟಬೇಕು, ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸಾಲಕ್ಕೆ ಬಡ್ಡಿಯಿಲ್ಲ. ಹಾಗಾಗಿ ಸಾಲದ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಮರುಪಾವತಿ ಸುಲಭವಾಗುತ್ತದೆ ಎಂದರು.

ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯುವ ಬದಲಿಗೆ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಮೂಲಕ ವ್ಯವಹರಿಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಣ್ಣುಮಕ್ಕಳಿಗೆ ಸಾಲ ವಿತರಿಸಲು ಸಾಧ್ಯವಾಗುತ್ತದೆ ಎಂದರು. ಶಾಸಕ ವಿ.ಮುನಿಯಪ್ಪ ಮಾತನಾಡಿ, ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಸ್ವಸಹಾಯ ಸಂಘಗಳಿಗೆ ಒದಗಿಸುತ್ತಿರುವ ಬಡ್ಡಿರಹಿತ ಸಾಲವನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಮಳ್ಳೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ 31 ಮಹಿಳಾ ಸ್ವಸಹಾಯ ಸಂಘಗಳಿಗೆ 1 ಕೋಟಿ 25 ಲಕ್ಷದ 72 ಸಾವಿರ ರೂ. ಸಾಲ ವಿತರಿಸಲಾಯಿತು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ರಾಮಿರೆಡ್ಡಿ, ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮಾಜಿ ಹಾಪ್ ಕಾಮ್ಸ್ ಅಧ್ಯಕ್ಷ ಬಿ.ವಿ.ಮುನೇಗೌಡ, ಮುಖಂಡರಾದ ಬಿ.ಎಂ.ವೆಂಕಟರೆಡ್ಡಿ, ಎಂ.ಆರ್.ಮುನಿಕೃಷ್ಣಪ್ಪ, ವೆಂಕಟಮೂರ್ತಿ, ಎಂ.ಎನ್.ನಾಗರಾಜ್, ಮಳ್ಳೂರು ಎಸ್‌ಎಫ್‌ಸಿಎಸ್ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಮತ್ತಿತರರು ಹಾಜರಿದ್ದರು.