ಜಿಲ್ಲೆ

ಡಿಸಿಸಿ ಬ್ಯಾಂಕ್‌ಗೆ ಮಹಿಳೆಯರೆ ಶಕ್ತಿ

Kolar

ಕೆಜಿಎಫ್: ಬಡವರ ರಕ್ತ ಹೀರುತ್ತಿರುವ ಬಡ್ಡಿ ಮಾಫಿಯಾದಿಂದ ಮಹಿಳೆಯರನ್ನು ರಕ್ಷಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ಸೌಲಭ್ಯ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಮರುಪಾವತಿಸಿ ಮತ್ತಷ್ಟು ನೆರವು ಪಡೆಯಬೇಕೆಂದು ಶಾಸಕಿ ಎಂ.ರೂಪಕಲಾ ಕರೆ ನೀಡಿದರು.

ತಾಲೂಕಿನ ಬೆನವಾರದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಶನಿವಾರ 2 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿ, ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಡಿಸಿಸಿ ಬ್ಯಾಂಕ್ ಪಕ್ಷಾತೀತವಾಗಿ ನೆರವಾಗುತ್ತಿದೆ. ಸಾಲ ಸೌಲಭ್ಯದಲ್ಲಿ ರಾಜಕೀಯ ಮಾಡುತ್ತಿಲ್ಲ, ಧರ್ಮ,ಪಕ್ಷ, ಜಾತಿಯನ್ನು ಮೀರಿ ಮಾನವೀಯ ನೆಲಗಟ್ಟಿನ ಮೇಲೆ ನೆರವಾಗುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ಎಂದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಬ್ಯಾಂಕ್ ಎಂಬ ಖ್ಯಾತಿಗೆ ಒಳಗಾಗಿದೆ. ಅವಿಭಜಿತ ಜಿಲ್ಲೆಯಲ್ಲಿ 7 ಲಕ್ಷ ತಾಯಂದಿರಿಗೆ ಬ್ಯಾಂಕ್ ನೆರವಾಗಿದೆ. ಆ ತಾಯಂದಿರೂ ಸಹಾ ಅಷ್ಟೇ ಮುತುವರ್ಜಿಯಿಂದ ಸಾಲ ಮರುಪಾವತಿಸಿ ತಮ್ಮ ಉಳಿತಾಯದ ಹಣವನ್ನು ಬ್ಯಾಂಕಿನಲ್ಲಿಟ್ಟು ಬ್ಯಾಂಕನ್ನು ಪೋಷಿಸುತ್ತಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬಡವರು, ಮಹಿಳೆಯರು, ರೈತರ ಪಾಲಿಗೆ ಡಿಸಿಸಿ ಬ್ಯಾಂಕ್ ದೇವಾಲಯವಿದ್ದಂತೆ. ಇದನ್ನು ಕಾಪಾಡಿಕೊಂಡು ಹೋಗುವ ಹೊಣೆ ನಿಮ್ಮದು. ಸಾಲ ಪಡೆಯುವ ಮಹಿಳೆಯರು, ರೈತರು ವಂಚನೆಗೆ ಒಳಗಾಗಬಾರದು. ಭ್ರಷ್ಟಾಚಾರದ ಆರೋಪ ಕೇಳಿಬರಬಾರದೆಂಬ ಕಾರಣಕ್ಕೆ ಪ್ರತಿ ಮಹಿಳೆಯರಿಗೂ ಎಟಿಎಂ ಕಾರ್ಡ್ ನೀಡಿ ಸಾಲದ ಹಣವೂ ಎಟಿಎಂ ಮೂಲಕ ಡ್ರಾಗೆ ಅವಕಾಶ ಕಲ್ಪಿಸಿರುವುದು ಕ್ರಾಂತಿಕಾರಿ ಹೆಜ್ಜೆ ಎಂದು ತಿಳಿಸಿದರು.

ಮಹಿಳೆಯರು ಸಾಲ ಪಡೆದು ಸದೃಢರಾಗಿ ಉಳಿತಾಯದ ಹಣವನ್ನು ಬ್ಯಾಂಕಿನಲ್ಲೇ ಠೇವಣಿ ಇಟ್ಟು ಬಡ್ಡಿ ಪಡೆಯುವ ಜತೆಗೆ ಮತ್ತಷ್ಟು ಜನರಿಗೆ ನೆರವು ನೀಡುವ ಶಕ್ತಿಯನ್ನು ಬ್ಯಾಂಕಿಗೆ ತುಂಬುವಂತೆ ಕೋರಿದರು. ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ಬಡ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಆಸರೆಯಾಗಿದೆ, ಖಾಸಗಿ ಬಡ್ಡಿ ಮಾಫಿಯಾದವರಿಂದ ಮಹಿಳೆಯರನ್ನು ರಕ್ಷಿಸುವ ಬ್ಯಾಂಕಿನ ಪ್ರಯತ್ನ ಶ್ಲಾಘನೀಯ ಎಂದರು. ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಸದಸ್ಯರಾದ ಯೋಶದಮ್ಮ, ವೆಂಕಟೇಶ್, ಜಿಪಂ ಮಾಜಿ ಉಪಾಧ್ಯಕ್ಷ ಅಪ್ಪಿವೆಂಕಟರಾಮರೆಡ್ಡಿ, ಮುನಿಸ್ವಾಮಿ, ಎನ್‌ಟಿಆರ್, ವಕೀಲರಾದ ಪದ್ಮನಾಬರೆಡ್ಡಿ ಹಾಗೂ ಇತರರು ಇದ್ದರು.